ಪುತ್ತೂರು: ‘ಕುಮ್ಕಿ ಭೂಮಿ ಕಾನೂನು’ ರಾಜ್ಯಮಟ್ಟದ ವಿಚಾರ ಸಂಕಿರಣ

ಪುತ್ತೂರು, ಮೇ 20: ರೈತರಿಗೆ ಕುಮ್ಕಿ ಹಕ್ಕು ನೀಡಬೇಕೆಂಬ ಸ್ಪಷ್ಟ ನಿಲುವು ನಮ್ಮದಾಗಿದ್ದು, ಇದಕ್ಕಾಗಿ ಈಗಾಗಲೇ ನಾನಾ ರೀತಿಯ ಉಪಕ್ರಮ ಕೈಗೊಳ್ಳಲಾಗಿದೆ. ಈ ಪ್ರಯತ್ನ ಇಲ್ಲಿಗೇ ನಿಲ್ಲುವುದಿಲ್ಲ. ರೈತರಿಗೆ ನ್ಯಾಯವಾಗಿ ಸಿಗಬೇಕಾದ ಕುಮ್ಕಿ ಹಕ್ಕನ್ನು ಕಲ್ಪಿಸುವವರೆಗೆ ವಿರಮಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ’ಕುಮ್ಕಿ ಭೂಮಿ ಕಾನೂನು-ಒಂದು ವಿಶ್ಲೇಷಣೆ’ ಎಂಬ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಮೊದಲು ಕೂಡ ಸದನದಲ್ಲಿ ನಾನು ಕುಮ್ಕಿ ಹಕ್ಕಿನ ಬಗ್ಗೆ ಮಾತನಾಡಿದ್ದೇನೆ. ಜುಲೈನಲ್ಲಿ ನಡೆಯುವ ಅಧಿವೇಶನದಲ್ಲಿ ಮತ್ತೆ ಇದೇ ವಿಷಯದ ಬಗ್ಗೆ ಪ್ರಸ್ತಾಪಿಸುತ್ತೇನೆ. ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸುನಿಲ್ ಕುಮಾರ್ ಮುಂತಾದವರ ಜೊತೆ ಮಾತುಕತೆ ನಡೆಸಿ ಜಂಟಿ ಕಾರ್ಯತಂತ್ರ ರೂಪಿಸಲಾಗುವುದು. ಕುಮ್ಕಿ ಸವಲತ್ತು ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲೂ ಜಾಗೃತಿ, ಹೋರಾಟ, ಚಳುವಳಿ ಇನ್ನಷ್ಟು ನಡೆಯಬೇಕು ಎಂದವರು ನುಡಿದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ 4 ಲಕ್ಷ ಕುಮ್ಕಿದಾರರಿದ್ದಾರೆ. ಇದರಲ್ಲಿ 2.50 ಲಕ್ಷ ರೈತರು ಸಣ್ಣ ಹಿಡುವಳಿದಾರರಿದ್ದಾರೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕುಮ್ಕಿ ಹಕ್ಕು ನೀಡುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿತ್ತು. ಕರಡು ಪ್ರತಿ ಪ್ರಕಟಿಸಲಾಗಿತ್ತು. ಅದರ ಪ್ರಕಾರ ಐದು ಎಕರೆವರೆಗೆ ಕುಮ್ಕಿ ಜಮೀನನ್ನು ಕನಿಷ್ಠ ಶುಲ್ಕದೊಂದಿಗೆ ಮಂಜೂರು ಮಾಡುವುದು. ಅದಕ್ಕಿಂತ ಹೆಚ್ಚಿನ ಕುಮ್ಕಿಯಿದ್ದರೆ ಸರಕಾರಿ ದರದ ಹತ್ತು ಶೇ. ಪಡೆದುಕೊಂಡು ಮಂಜೂರು ಮಾಡುವುದು ಇತ್ಯಾದಿ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಲಾಗಿತ್ತು. ಇನ್ನೇನು ಅಧಿಕೃತ ಸರಕಾರಿ ಆದೇಶ ಬರುವಷ್ಟರಲ್ಲಿ ಅರಣ್ಯ ಇಲಾಖೆಯಿಂದ ತಕರಾರು ಬಂದ ಕಾರಣ ಹಿನ್ನಡೆಯಾಯಿತು. ಅಷ್ಟರಲ್ಲಿ ಚುನಾವಣೆ ಬಂದ ಕಾರಣ ಕಾನೂನು ಬಾಕಿಯಾಯಿತು ಎಂದವರು ವಿವರಿಸಿದರು.
ಬಡವರಿಗೆ ನೀಡಲು ಜಾಗವಿಲ್ಲ ಎಂಬ ಕಾರಣವನ್ನು ಈಗಿನ ಸಚಿವರು ಹೇಳುತ್ತಿದ್ದಾರೆ. ಅದು ನಿಜವಿರಲೂಬಹುದು. ಆದರೆ ಅಕ್ರಮ - ಸಕ್ರಮದಲ್ಲಿ ಐದು ಎಕರೆವರೆಗೆ ಸರಕಾರಿ ಜಾಗವನ್ನು ನೀಡಿದ ಉದಾಹರಣೆ ಇದೆ. ಹೀಗಿರುವಾಗ ಪರಂಪರಾಗತವಾಗಿ ರೈತರ ಕೈಯ್ಯಲ್ಲೇ ಇರುವ ಕುಮ್ಕಿಯನ್ನ ಯಾಕೆ ನೀಡಬಾರದು ಎಂದವರು ಪ್ರಶ್ನಿಸಿದರು
ಕನಿಷ್ಠ 3 ಅಥವಾ 5 ಸೆಂಟ್ಸ್ ಜಾಗಕ್ಕಾಗಿ ಹಕ್ಕು ಪತ್ರ ಪಡೆಯಲು 80 ಸಾವಿರ ಜನ ನಮ್ಮ ಅವಳಿ ಜಿಲ್ಲೆಯಲ್ಲಿ ಕಾಯುತ್ತಿದ್ದಾರೆ. ಅವರಿಗೂ ನ್ಯಾಯ ಸಿಗಬೇಕಾಗಿದೆ. ಶೇಂದಿ ನಿಷೇಧಗೊಂಡ ಸಂದರ್ಭ ಜಿಲ್ಲೆಯಲ್ಲಿ ನಡೆದ ಚಳುವಳಿ ಎಷ್ಟು ತೀವ್ರವಾಗಿತ್ತು ಎಂದರೆ ಇಡೀ ರಾಜ್ಯದಲ್ಲಿ ಕೇವಲ ಅವಿಭಜಿತ ದ.ಕ. ಜಿಲ್ಲೆಗೆ ಮಾತ್ರ ನಿಷೇಧದಿಂದ ವಿನಾಯಿತಿ ಸಿಕ್ಕಿತು. ಅಂಥ ಚಳುವಳಿ ಕುಮ್ಕಿ ವಿಚಾರದಲ್ಲಿ ಮತ್ತು ಎತ್ತಿನಹೊಳೆ ವಿಚಾರದಲ್ಲಿ ನಡೆಯಬೇಕಿದೆ ಎಂದವರು ನುಡಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಕುಕ್ಕಾಜೆ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕುಮ್ಕಿ ವಿಚಾರದಲ್ಲಿ ನೀಡಿದ ತೀರ್ಪು ಹಾಲಿ ಕಾನೂನಿನ ವ್ಯಾಪ್ತಿಯಲ್ಲಿ. ಹೀಗಾಗಿ ಕಾನೂನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಂಚಾಲಕ ಎಂ.ಜಿ. ಸತ್ಯನಾರಾಯಣ, ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುಡಿ, ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾದ ಶಂಕರ ಎಸ್.ಭಟ್, ಪುತ್ತೂರಿನ ವಕೀಲರಾದ ಕೆ.ಆರ್. ಆಚಾರ್ಯ ಉಪಸ್ಥಿತರಿದ್ದರು.
ವಿವೇಕಾನಂದ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ವಿ.ವಿ.ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಪ್ರಿನ್ಸಿಪಾಲ್ ಕೆ.ಜಿ.ಕೃಷ್ಣಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರದ್ಧಾ ಪಿ. ಮತ್ತು ವಿದ್ಯಾರ್ಥಿನಿ ಪ್ರಸನ್ನ ಕೆ. ಕಾರ್ಯಕ್ರಮ ನಿರೂಪಿಸಿದರು.







