ಹೊಂದಾಣಿಕೆಯ ಕೊರತೆ ಬಿಜೆಪಿ ಗೆಲುವಿಗೆ ಕಾರಣ: ಪಿಎಫ್‌ಐ
ಹೊಸದಿಲ್ಲಿ, ಮೇ 20: ಜಾತ್ಯತೀತ ಮತ್ತು ಅಲ್ಪಸಂಖ್ಯಾತರ ರಕ್ಷಕ ಎಂಬ ಹಣೆಪಟ್ಟಿ ಹೊತ್ತ ಪಕ್ಷಗಳ ಅನೈತಿಕ ಹಾಗೂ ಅವಕಾಶವಾದಿ ರಾಜಕೀಯವೇ ಅಸ್ಸಾಂ, ಕೇರಳದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣವಾಯಿತು ಎಂದು ಪಾಪ್ಯುಲರ್ ಫ್ರಂಟ್‌ನ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್ ಹೇಳಿದ್ದಾರೆ.
ಅಸ್ಸಾಂ, ಕೇರಳದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಸಿಪಿಎಂ, ಎಐಯುಡಿಎಫ್ ಪಕ್ಷಗಳು ಫ್ಯಾಸಿಸಂ ವಿರುದ್ಧ ಮಾತನಾಡುತ್ತಾ, ಅಲ್ಪಸಂಖ್ಯಾತರ ಮತಗಳನ್ನು ಆಕರ್ಷಿಸಲು ಪ್ರಯತ್ನಿಸಿದ್ದರೂ, ಕೊನೆಯ ಪಕ್ಷ ಬಿಜೆಪಿಯ ಗೆಲುವಿಗೆ ಅವಕಾಶವಿರುವ ಕ್ಷೇತ್ರಗಳಲ್ಲಿ ಏಕೈಕ ಅಭ್ಯರ್ಥಿಯನ್ನು ಹಾಕುವ ಚುನಾವಣಾ ತಂತ್ರಗಾರಿಕೆಗೆ ತಯಾರಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮೈತ್ರಿ ಏರ್ಪಡಿಸಲು ಯಾವುದೇ ಅಡೆತಡೆ ಇರಲಿಲ್ಲ. ಕೇರಳದ ಬಿಜೆಪಿಯ ಗೆಲುವಿಗೆ ಅವಕಾಶವಿರುವ ಕ್ಷೇತ್ರದಲ್ಲಿ ಇದೇ ತಂತ್ರಗಾರಿಕೆಯನ್ನು ರೂಪಿಸಿದ್ದರೆ, ಬಿಜೆಪಿಯು ಒಂದು ಸೀಟಿನೊಂದಿಗೆ ಏಳು ಕ್ಷೇತ್ರಗಳಲ್ಲಿ ಎರಡನೆ ಸ್ಥಾನವನ್ನು ಪಡೆಯುತ್ತಿರಲಿಲ್ಲ. ಅದೇ ರೀತಿ ಅಸ್ಸಾಂನಲ್ಲಿ ಅಲ್ಪಸಂಖ್ಯಾತರ ಮತ್ತು ಜಾತ್ಯತೀತ ಮತದಾರರ ಅಭಿಲಾಷೆಯಂತೆ ಕಾಂಗ್ರೆಸ್ ಮತ್ತು ಎಐಯುಡಿಎಫ್ ಮೈತ್ರಿ ಏರ್ಪಡಿಸಲಿಲ್ಲ.
ಪಾಪ್ಯುಲರ್ ಫ್ರಂಟ್ ಈ ಅಪಾಯದ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ನೀಡಿತ್ತು ಮತ್ತು ಸಂಬಂಧಪಟ್ಟ ಪಕ್ಷಗಳ ಜವಾಬ್ದಾರಿಯ ಬಗ್ಗೆ ಹೇಳಿತ್ತು. ಅಲ್ಪಸಂಖ್ಯಾತರ ಮತಗಳು ಬಿಜೆಪಿಯ ವಿರುದ್ಧ ಚಲಾಯಿಸಲ್ಪಟ್ಟರೂ ದುರುದೃಷ್ಟ್ಟವಶಾತ್, ಈ ಪಕ್ಷಗಳ ನಿರ್ಲಕ್ಷದಿಂದಾಗಿ ಅಸ್ಸಾಂ ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಶರಣಾಯಿತು ಮತ್ತು ಕೇರಳದಲ್ಲಿ ಹಿಂದುತ್ವದ ಅಜೆಂಡಾಗಳಿಗೆ ದಾರಿ ಸುಗಮವಾಯಿತು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ತುಳುನಾಡಿನಲ್ಲಿ ಎಐಎಡಿಎಂಕೆ, ಕೇರಳದಲ್ಲಿ ಎಲ್‌ಡಿಎಫ್‌ನ ಗೆಲುವಿಗೆ ಅಭಿನಂದನೆಯನ್ನು ಸಲ್ಲಿಸಿರುವ ಅವರು, ಹೊಸ ಸರಕಾರಗಳು ಜನ ಸಾಮಾನ್ಯರ ಅಭಿಲಾಷೆಗಳನ್ನು ಈಡೇರಿಸಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.







