ಅಂಕಗಳ ಜೊತೆ ವ್ಯಕ್ತಿತ್ವ ವಿಕಸನ ಅಗತ್ಯ: ಕಿಮ್ಮನೆ ರತ್ನಾಕರ್
ಅಭಿನಂದನಾ ಸಮಾರಂಭ

ತೀರ್ಥಹಳ್ಳಿ, ಮೇ 20: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅರ್ಹತೆ ಆಧಾರದ ಮೇಲೆ ಬರಬೇಕು. ಅದಕ್ಕಾಗಿ ಎಲ್ಲ ರೀತಿಯ ಶ್ರಮ ವಹಿಸಬೇಕೇ ಹೊರತು ಬೇರಾವುದೇ ಮಾರ್ಗಗಳು ಅತ್ಯುತ್ತಮ ಶಿಕ್ಷಣ ಪಡೆಯಲು ಇಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸೆಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು ತಮ್ಮ ಪೋಷಕರಿಂದ ಒಳ್ಳೆಯದನ್ನು ಕಲಿಯಬೇಕು. ಅದೇ ರೀತಿ ಪೋಷಕರು ಕೂಡ ತಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಒಳ್ಳೆಯ ಗುಣಗಳನ್ನೇ ಧಾರೆ ಎರೆಯಬೇಕು. ಮಕ್ಕಳು ಕೇವಲ ಅತೀ ಹೆಚ್ಚು ಅಂಕಗಳ ಕಡೆಗೆ ಗಮನ ಕೊಡದೆ ವೈಯಕ್ತಿಕವಾಗಿಯೂ ಸಮಾಜಕ್ಕೆ ಪೂರಕವಾದ ಗುಣಗಳನ್ನು ಬೆಳೆಸಿಕೊಟ್ಟು ಉತ್ತಮ ನಾಗರಿಕರಾಗುವುದು ಮುಖ್ಯ ಎಂಬುದನ್ನು ಮನಗಂಡಾಗ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರು ಭಾರತಿ ಪ್ರಭಾಕರ್, ಕಲ್ಪನಾ ಪದ್ಮನಾಭ್, ಶ್ವೇತಾ ಬಂಡಿ, ಶರತ್ ಪೂರ್ಣೇಶ್, ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್, ತಹಶೀಲ್ದಾರ್ ಲೋಕೇಶಪ್ಪ, ವಾರ್ತಾ ಮತ್ತು ಪ್ರಚಾರಾಧಿಕಾರಿ ಹೇಮಂತ್‌ರಾಜ್ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ತಾಲೂಕಿನ ವಿವಿಧ ಶಾಲೆಗಳ 32 ಮಕ್ಕಳಿಗೆ ಸಚಿವರು ಶಾಲು ಹೊದಿಸಿ ಸನ್ಮಾನಿಸಿ ನಗದು ಪುರಸ್ಕಾರ ನೀಡಿ ಗೌರವಿಸಿದರು.





