ಕಾಮಗಾರಿಗಳನ್ನು ಮಳೆಗಾಲದೊಳಗೆ ಪೂರ್ಣಗೊಳಿಸಿ: ಉಜ್ವಲ್ ಕುಮಾರ್
ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ
ಕಾರವಾರ, ಮೇ 20: ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಎಲ್ಲ ನಗರೋತ್ಥಾನ ಕಾಮಗಾರಿಗಳನ್ನು ಮಳೆಗಾಲದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ತಿಳಿಸಿದ್ದಾರೆ.
ಅವರು, ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿ, ಕಾರವಾರ, ಶಿರಸಿ ಹಾಗೂ ಹಳಿಯಾಳದಲ್ಲಿ ಒತ್ತುವರಿ ತೆರವು ಇತ್ಯಾದಿ ಕಾರಣಗಳಿಗಾಗಿ ಕಾಮಗಾರಿ ಪೂರ್ಣಗೊಳಿಸುವ ಅವಧಿಯನ್ನು ಮಾರ್ಚ್ 2016ರವರೆಗೆ ವಿಸ್ತರಿಸಲಾಗಿತ್ತು. ಸದ್ಯ ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ 6ಕಾಮಗಾರಿ, ಶಿರಸಿಯಲ್ಲಿ 6, ಕುಮಟಾದಲ್ಲಿ 1 ಹಾಗೂ ಹೊನ್ನಾವರದಲ್ಲಿ 1ಕಾಮಗಾರಿ ಪ್ರಗತಿಯಲ್ಲಿವೆ. ಇನ್ನುಳಿದಂತೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಕಾರವಾರ-ಕೋಡಿಭಾಗ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಿಂದ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕಾಮಗಾರಿಯನ್ನು ನಿರ್ವಹಿಸಬೇಕು ಎಂದರು.
ನಗರೋತ್ಥಾನ ಕಾಮಗಾರಿಗಳ ನಿರ್ವಹಣೆ 2ವರ್ಷಗಳ ಅವಧಿಯದ್ದಾಗಿದ್ದು, ಕಾಮಗಾರಿ ಪೂರ್ಣಗೊಂಡು ಹಸ್ತಾಂತರಿಸಿದ ಬಳಿಕದ ದಿನವನ್ನು ಇದಕ್ಕಾಗಿ ಪರಿಗಣಿಸಲಾಗುವುದು. ಅವಧಿ ಪೂರ್ಣಗೊಂಡ ಬಳಿಕ ಯೋಜನೆಯ ಪೂರ್ಣ ಅನುದಾನವನ್ನು ನಿಯಮಾನುಸಾರ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಬಾಂಡಿಶಿಟ್ಟಾ-ಕೋಡಿಬಾಗ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದ್ದು, 1ವಾರದೊಳಗಾಗಿ ಹಣ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೀರು ಪೂರೈಕೆ:
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಹಾಗೂ ಕಾರವಾರ ನಗರದಲ್ಲಿ ಪ್ರತಿದಿನ ನೀರು ಪೂರೈಕೆ ಮಾಡಲು ನಲ್ಲಿ ಸಂಪರ್ಕ ಹೆಚ್ಚಳ, ನಲ್ಲಿ ಸಂಪರ್ಕಕ್ಕೆ ವೈಯಕ್ತಿಕ ಮೀಟರ್ ಅಳವಡಿಕೆ, ಕರ ವಸೂಲಿ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಪೂರೈಕೆ ಶುಲ್ಕವನ್ನು ಎಲ್ಲ ಸ್ಥಳೀಯ ಸಂಸ್ಥೆಗಳು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಕಡ್ಡಾಯವಾಗಿ ಪಾವತಿಸಬೇಕು.
ಸಗಟು ನೀರು ಪೂರೈಕೆಗೆ ನೀರು ಸರಬರಾಜು ಮಂಡಳಿ ಮೀಟರ್ ಅಳವಡಿಸಬೇಕು. ಈ ಕುರಿತು ಆರು ತಿಂಗಳ ಹಿಂದೆಯೇ ಸ್ಪಷ್ಟ ಆದೇಶ ನೀಡಲಾಗಿದೆ. ಆದರೂ ಈವರೆಗೆ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.







