ಜನಮನ ಸೆಳೆದ ಮಾವು- ಹಲಸು ಮೇಳ

ಹಾಪ್‌ಕಾಮ್ಸ್ ಸಂಸ್ಥೆಯು ಬೆಂಗಳೂರಿನಲ್ಲಿ ಸೋಮ ವಾರದಿಂದ ಆರಂಭಿಸಿರುವ ಮಾವು ಮತ್ತು ಹಲಸು ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಕೇವಲ ಮೂರೇ ದಿನಗಳಲ್ಲಿ 40 ಟನ್‌ಗೂ ಅಕ ಮಾವು ಮಾರಾಟವಾಗಿದೆ. ಈ ಕಡೆ ಹಲಸಿನ ಹಣ್ಣಿಗೆ ಈ ವರ್ಷ ಬೇಡಿಕೆ ಕುಸಿದಿದ್ದು ಸುಮಾರು 500 ಕೆ.ಜಿ.ಯಷ್ಟು ಮಾರಾಟವಾಗಿದೆ.
ಕಾರ್ಬೈಡ್ ಬಳಸದೇ ನೈರ್ಸಗಿಕವಾಗಿ ಹಣ್ಣಾದ ಮಾವು ಮತ್ತು ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಮೇಳದಲ್ಲಿ 15 ವಿವಿಧ ತಳಿಗಳ ಮಾವು ಮತ್ತು ಐದು ತಳಿಯ ಹಲಸಿನ ಹಣ್ಣುಗಳು ಗ್ರಾಹಕರ ಕಣ್ಮನ ಸೆಳೆಯುತ್ತಿವೆ.
ಮಾವಿನ ಹಣ್ಣುಗಳು ತಳಿಗಳ ಆಧಾರದಲ್ಲಿ ಪ್ರತಿ ಕೆ.ಜಿ.ಗೆ ಕನಿಷ್ಠ 17 ರೂ.ಗಳಿಂದ ಗರಿಷ್ಠ 95ರೂ ಗಳವರೆಗೂ ಮಾರಾಟವಾಗುತ್ತಿವೆ. ತೋತಾಪುರಿ ಪ್ರತಿ ಕೆ.ಜಿ.ಗೆ 17 ರೂ.ನಂತೆ ಕಡಿಮೆ ಬೆಲೆಗೆ ಮಾರಾಟವಾದರೆ, ಮಲಗೋವ ಪ್ರತಿ ಕೆ.ಜಿ.ಗೆ 95 ರೂ.ಗಳಂತೆ ಗರಿಷ್ಠ ಬೆಲೆಗೆ ಮಾರಾಟವಾಗುತ್ತಿವೆ. ಹಲಸಿನ ಹಣ್ಣು ಪ್ರತಿ ಕೆ.ಜಿ.ಗೆ 17ರಿಂದ 19 ರೂ.ಗಳಂತೆ ಮಾರಾಟವಾಗುತ್ತಿವೆ.
ಕಳೆದ ವರ್ಷಕ್ಕಿಂತ ಈ ವರ್ಷದ ಮಾರುಕಟ್ಟೆ ಧಾರಣೆ ಕೊಂಚ ಹೆಚ್ಚಳವಾಗಿದೆ. ಕಳೆದ ಬಾರಿ ತೋತಾಪುರಿಯು ಪ್ರತಿ ಕೆ.ಜಿಗೆ ಗುಣಮಟ್ಟದ ಆಧಾರದಲ್ಲಿ 12ರಿಂದ 16 ರೂ.ಗಳಿಗೆ ರೈತರಿಂದ ಖರೀದಿಸಲಾಗುತ್ತಿತ್ತು. ಈ ವರ್ಷ 2-5 ರೂ.ಗಳಷ್ಟು ಹೆಚ್ಚಳವಾಗಿದೆ. ಇದೇ ರೀತಿ ಎಲ್ಲ ತಳಿಗಳ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆ ಮೂಲಕ ರೈತರಿಗೆ ಹೆಚ್ಚಿನ ಆದಾಯವಾಗಿ ಸಹಜವಾಗಿಯೇ ಸಂತಸ ಮೂಡಿದೆ.
ರೈತರಿಂದ ನೇರವಾಗಿ ಮಾವು ಮತ್ತು ಹಲಸು ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಾವು ಮತ್ತು ಹಲಸು ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ನಗರದಲ್ಲಿ ಒಟ್ಟು 250 ಮಳಿಗೆಗಳಲ್ಲಿ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆಗಳ ಒಟ್ಟು 25 ಮಳಿಗೆಗಳಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ.
ಮಾರಾಟಕ್ಕಿಟ್ಟಿರುವ ವಿವಿಧ ತಳಿಗಳು: ಮಾವಿನ ಹಣ್ಣಿನ ತಳಿಗಳಾದ ರಸಪೂರಿ, ಸೆಂದೂರ, ಬಾದಾಮಿ, ಮಲಗೋವ, ಬೈಗಾನ್‌ಪಲ್ಲಿ, ಮಲ್ಲಿಕಾ, ಕಾಲಪಾಡು, ನೀಲಂ, ದಸರಿ, ಸಕ್ಕರೆ ಗುತ್ತಿ, ಕೆಸರ್, ನಾಟಿ, ರೋಮೇನಿಯ ಸಿರಿ, ತೋತಾಪುರಿ. ಹಲಸಿನ ತಳಿಗಳಾದ ಸಕ್ಕರಾಯಪಟ್ಟಣ, ತೂಬಿಗೆರೆ, ಚಂದ್ರ, ಬೈರಸಂದ್ರ, ಜಾನಗೆರೆ, ಗಮ್‌ಲೆಸ್ ಹಲಸು ಮಾರಾಟ ಮಾಡಲಾಗುತ್ತಿದೆ.
ಆಯ್ದ ಹಣ್ಣುಗಳಷ್ಟೇ ಮಾರಾಟ: ರೈತರಿಂದ ಉತ್ತಮ ಮತ್ತು ಗುಣಮಟ್ಟದ ಮಾವುಗಳನ್ನು ಆಯ್ದು ಮಾರಾಟ ಮಾಡಲಾಗುತ್ತಿದೆ. ಲಾಲ್‌ಬಾಗ್ ಉದ್ಯಾನದಲ್ಲಿರುವ ಹಾಪ್‌ಕಾಮ್ಸ್ ಗೋದಾಮಿನ ಬಳಿ ಪ್ರತಿದಿನ 300ಕ್ಕೂ ಅಕ ರೈತರು ಮಾವು ಮಾರಾಟ ಮಾಡಲು ಬರುತ್ತಾರೆ. ಇವರಲ್ಲಿ ಗುಣಮಟ್ಟದ ಮಾವಿನ ಕಾಯಿಗಳನ್ನು ಹೊಂದಿರುವ 30-40 ಮಂದಿ ರೈತರಲ್ಲಿ ಮಾತ್ರ ಖರೀದಿಸಲಾಗುತ್ತಿದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲ. ರೈತರಿಂದ ನೇರವಾಗಿ ಖರೀದಿಸಿದ ಬೆಲೆಯಲ್ಲೆ ಗ್ರಾಹಕರಿಗೆ ಶೇ.10 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ತಿಳಿಸಿದರು.
ಸಾವಿರ ಟನ್ ಮಾರಾಟ ಗುರಿ: ಕಳೆದ ವರ್ಷ ಮೇಳದಲ್ಲಿ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ 577 ಟನ್ ಮಾವು ಹಾಗೂ 70 ಟನ್ ಹಲಸಿನ ಹಣ್ಣು ಮಾರಾಟ ಮಾಡಲಾಗಿತ್ತು. ಈ ವರ್ಷದಲ್ಲಿ ಒಂದು ಸಾವಿರ ಟನ್ ಮಾವಿನ ಹಣ್ಣು ಮತ್ತು 150 ಟನ್ ಹಲಸು ಮಾರಾಟ ಮಾಡಲು ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ರಾಮನಗರ ಹಣ್ಣುಗಳಿಗೆ ಬೇಡಿಕೆ ಹೆಚ್ಚು:
ಮೇಳದಲ್ಲಿ ಬೆಂಗಳೂರು ಗ್ರಾಂ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಪೈಕಿ ರಾಮನಗರ ಜಿಲ್ಲೆಯ ಮಾವಿಹಣ್ಣುಗಳಿಗೆ ಉತ್ತಮ ಬೇಡಿಕೆ ಸಿಗುತ್ತಿದೆ. ಮೇಳದಲ್ಲಿ ಇದುವರೆಗೂ ಮಾರಾಟವಾಗಿರುವ ಹಣ್ಣುಗಳಲ್ಲಿ ಶೇ.50 ರಷ್ಟು ರಾಮನಗರದ ಮೂಲದ ಹಣ್ಣುಗಳು ಮಾರಾಟವಾಗಿವೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್ ತಿಳಿಸಿದರು.
ಇನ್ನೂ ಬರದ ಶ್ರೀನಿವಾಸಪುರ ಮಾವು: ಈ ವರ್ಷದ ಭೀಕರ ಬರಗಾಲದಿಂದ ಮಾವು ಬೆಳೆ ಕುಂಠಿತವಾಗಿದೆ. ಪರಿಣಾಮ ಮಾವಿನ ತವರೂರು ಎಂದು ಖ್ಯಾತಿ ಹೊಂದಿರುವ ಶ್ರೀನಿವಾಸಪುರದ ಮಾವು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಮೇಳಕ್ಕೆ ಮಾವಿನ ಹಣ್ಣುಗಳ ಕೊರತೆ ಉಂಟಾಗಲಿದೆ. ಮುಂದಿನ 10-15 ದಿನಗಳಲ್ಲಿ ಶ್ರೀನಿವಾಸಪುರದ ಮಾವು ಕಟಾವಿಗೆ ಬರಲಿದೆ. ಆದುದರಿಂದ ಈ ಭಾಗದ ರೈತರನ್ನು ಸಂಪರ್ಕಿಸಿ ಮಾವಿನ ಹಣ್ಣನ್ನು ಪೂರೈಸಲು ಕೋರಲಾಗಿದೆ ಎಂದರು.
ವಿಸ್ತರಿಸಲು ನಿರ್ಧರಿಸಲಾಗಿದೆ
ಜೂನ್ 16ರವರೆಗೂ ಮೇಳ ನಡೆಸಬೇಕು ಎಂದು ತೀರ್ಮಾನಿಸ ಲಾಗಿತ್ತು. ಆದರೆ ಗ್ರಾಹಕರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯಿಂದಾಗಿ ಮೇಳದ ಕಾಲದ ಮಿತಿಯನ್ನು ವಿಸ್ತರಿಸಲಾಗುವುದು. ಅಕ ಪ್ರಮಾಣದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಈ ವರ್ಷ ವಿಶೇಷ ಸಂಚಾರಿ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
-ಡಾ.ಬೆಳ್ಳೂರು ಕೃಷ್ಣ,ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ

ರಾಸಾಯನಿಕ ಮುಕ್ತ ಹಣ್ಣುಗಳು
ಹಾಪ್‌ಕಾಮ್ಸ್ ಆಯೋಜಿಸಿರುವ ಮೇಳದಲ್ಲಿ ರಾಸಾಯನಿಕ ಮುಕ್ತ ಮತ್ತು ಉತ್ತಮವಾದ ಮಾವಿನ ಹಣ್ಣುಗಳು ದೊರಕುತ್ತಿವೆ. ಇಲ್ಲಿನ ಹಣ್ಣುಗಳು ತಿನ್ನಲು ರುಚಿಕರ ಮತ್ತು ಆರೋಗ್ಯಕ್ಕೂ ಉತ್ತಮ. ಅಲ್ಲದೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ಅವಶ್ಯಕ್ಕಿಂತ ಹೆಚ್ಚಿನದಾಗಿ ಹಣ್ಣುಗಳನ್ನು ಖರೀದಿಸುತ್ತೇನೆ.
-ಮುರಳಿ, ಗ್ರಾಹಕ ಕೆ.ಆರ್.ಪುರ







