ಕೆಪಿಸಿಸಿ ಅಧ್ಯಕ್ಷರಿಗೆ ಸೂಕ್ತ ಪ್ರತ್ಯುತ್ತರ ಪತ್ರ: ಆಂಜನೇಯ
ಖಾಸಗಿ ಶಿಕ್ಷಣ ಸಂಸ್ಥೆಗಳ ‘ವಸೂಲಿ ದಂಧೆ’' ವಿವಾದ

ಬೆಂಗಳೂರು, ಮೇ 20: ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ತಾವು ನೀಡಿದ ಹೇಳಿಕೆಯ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಶೀಘ್ರದಲ್ಲೆ ಪತ್ರದ ಮೂಲಕ ಸೂಕ್ತ ಉತ್ತರ ನೀಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಪತ್ರ ಇದೀಗ ತನ್ನ ಕೈ ಸೇರಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತಾನು ‘ವೇಶ್ಯಾವಾಟಿಕೆ ಅಡ್ಡೆಗಳು’ ಅಥವಾ ‘ವೇಶ್ಯಾವಾಟಿಕೆ ಕೇಂದ್ರಗಳು’ ಎಂಬ ಪದ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಾನು ಪಾಲ್ಗೊಂಡ ವೇಳೆ ಮೈಮೇಲಿನ ಒಡವೆ, ತಾಳಿಯನ್ನು ಮಾರಾಟ ಮಾಡಿ ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಣ ಪಾವತಿಸುತ್ತಿದ್ದೇವೆ. ಆದರೂ, ಖಾಸಗಿ ಶಿಕ್ಷಣ ಸಂಸ್ಥೆಗಳು ನಮ್ಮ ಮಕ್ಕಳನ್ನು ಅಸ್ಪಶ್ಯರಂತೆ ಕಾಣುತ್ತಿದ್ದಾರೆ ಎಂದು ಖಾಸಗಿ ಶಿಕ್ಷಣ ಸಂಸ್ಥೆ ವಸೂಲಿ ದಂಧೆ ಬಗ್ಗೆ ಪೋಷಕರೆ ನನ್ನ ಬಳಿ ನೋವು ತೋಡಿಕೊಂಡಿದ್ದರು.
ಪೋಷಕರ ನೋವು ಅರಿತು ತಾನು ಕೆಲ ಕಠಿಣ ಶಬ್ದಗಳನ್ನು ಬಳಸಿದ್ದೇನೆ. ಆದರೆ, ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತಾನು ಟೀಕಿಸಿಲ್ಲ. ಯಾವುದೇ ಆಕ್ಷೇಪಾರ್ಹ ಪದವನ್ನು ಬಳಸಿಲ್ಲ. ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ವದ ಉದ್ದೇಶದಿಂದ ಜಾರಿಗೊಳಿಸಿರುವ ಆರ್‌ಟಿಇ ಅಡಿ ದಾಖಲಾದ ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡುವವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
‘ಉನ್ನತ ಶಿಕ್ಷಣದಲ್ಲಿಯೂ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನ ಸಂಬಂಧ ಪ್ರಧಾನ ಮಂತ್ರಿಗೆ ಮನವಿ ಮಾಡಲು ಸಿಎಂ ಸಿದ್ದರಾಮಯ್ಯನವರ ಜತೆ ಚರ್ಚಿಸುವೆ. ಈ ಸಂಬಂಧ ಪ್ರಧಾನಿಗೆ ಪತ್ರವನ್ನು ಬರೆಯಲು ಗಂಭೀರ ಚಿಂತನೆ ನಡೆಸಲಾಗುವುದು’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ





