ಪಂಜಾಬ್-ಪುಣೆಗೆ ಇಂದು ಪ್ರತಿಷ್ಠೆಯ ಪಂದ್ಯ
ವಿಶಾಖಪಟ್ಟಣ, ಮೇ 20: ಈಗಾಗಲೇ ಒಂಭತ್ತನೆಯ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಪರ್ಧೆಯಿಂದ ಹೊರ ನಡೆದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ರವಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇವಲ ಪ್ರತಿಷ್ಠೆಗಾಗಿ ಸೆಣಸಾಡಲಿವೆ.
ಸೂಪರ್ ಜಯಂಟ್ಸ್ ತಂಡ ಇದೇ ಮೈದಾನದಲ್ಲಿ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯವನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ, ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಿರುವ ಕಳೆದೆರಡು ಪಂದ್ಯಗಳಲ್ಲಿ ಸೋಲುಂಡಿದೆ.
ಪುಣೆ ನಾಯಕ ಎಂಎಸ್ ಧೋನಿ ಈ ತನಕದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ ಕಿಂಗ್ಸ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಚೆನ್ನೈ ತಂಡ ಪ್ಲೇ-ಆಫ್ ಮುನ್ನವೇ ಟೂರ್ನಿಯಿಂದ ಹೊರ ನಡೆದಿರಲಿಲ್ಲ.
ಆದರೆ, ಈ ವರ್ಷ ಪುಣೆ ತಂಡದಲ್ಲಿ ಆಟಗಾರರ ಗಾಯಾಳು ಸಮಸ್ಯೆ ಟೂರ್ನಿಯುದ್ದಕ್ಕೂ ಬೆಂಬಿಡದೇ ಕಾಡಿದೆ. ಸ್ಟಾರ್ ಆಟಗಾರರಾದ ಕೆವಿನ್ ಪೀಟರ್ಸನ್, ಸ್ಟೀವ್ ಸ್ಮಿತ್, ಎಫ್‌ಡು ಪ್ಲೆಸಿಸ್ ಹಾಗೂ ಮಿಚೆಲ್ ಮಾರ್ಷ್ ಟೂರ್ನಿಯ ಮಧ್ಯೆದಲ್ಲೇ ಗಾಯಗೊಂಡು ತವರಿಗೆ ವಾಪಸಾಗಿದ್ದರು.
ಪಂಜಾಬ್‌ನ ಸ್ಥಿತಿಯು ಪುಣೆಗಿಂತ ಭಿನ್ನವಾಗಿಲ್ಲ. ಸತತ ಸೋಲಿನಿಂದ ಕಂಗೆಟ್ಟಿರುವ ಪಂಜಾಬ್ ತಂಡದಲ್ಲಿ ನಾಯಕತ್ವ ಬದಲಿಸಿದರೂ ಪ್ರಯೋಜನವಾಗಿಲ್ಲ. ಡೇವಿಡ್ ಮಿಲ್ಲರ್‌ರಿಂದ ನಾಯಕತ್ವವನ್ನು ಪಡೆದಿದ್ದ ಮುರಳಿ ವಿಜಯ್‌ಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಪಂಜಾಬ್ ತಂಡ ಈ ಹಿಂದಿನ ಆವೃತ್ತಿಯಂತೆಯೇ ಕೆಟ್ಟ ಪ್ರದರ್ಶನ ಪುನರಾವರ್ತಿಸಿದೆ.
ತಂಡದ ಆಡಳಿತ ಮಂಡಳಿ ಹಾಗೂ ಮಾಲಕರ ನಡುವಿನ ಭಿನ್ನಾಭಿಪ್ರಾಯವೂ ಪಂಜಾಬ್ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಪಂಜಾಬ್ ತಂಡದಲ್ಲಿ ಉತ್ತಮ ಆಟಗಾರರ ಕೊರತೆಯಿದೆ. ಬಿಗ್ ಹಿಟ್ಟರ್ ಡೇವಿಡ್ ಮಿಲ್ಲರ್ ಈ ವರ್ಷ ಆರ್ಭಟಿಸಲೇ ಇಲ್ಲ. ತಂಡದ ಪರ ಸ್ಥಿರ ಪ್ರದರ್ಶನ ನೀಡಬಲ್ಲ ಮ್ಯಾಕ್ಸ್‌ವೆಲ್ ಹಾಗೂ ಶಾನ್ ಮಾರ್ಷ್ ಟೂರ್ನಿಯ ನಡುವೆಯೇ ತಂಡವನ್ನು ತೊರೆದಿರುವುದು ತಂಡದ ಸಮಸ್ಯೆಯನ್ನು ಬಿಗಡಾಯಿಸಿದೆ.
ಪಂದ್ಯದ ಸಮಯ: ಸಂಜೆ 4:00







