ಎಸೆಸೆಲ್ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ
ಶಾಲೆಗಳಿಗೆ ಸರಕಾರ ಸೂಚನೆ
ಬೆಂಗಳೂರು, ಮೇ 20: ಈ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೂಡಲೆ ಕಡ್ಡಾಯವಾಗಿ ವಿಶೇಷ ತರಗತಿಗಳನ್ನು ನಡೆಸುವಂತೆ ರಾಜ್ಯದ ಎಲ್ಲಾ ಪ್ರೌಢಶಾಲೆಗಳಿಗೆ ಸರಕಾರ ಸೂಚನೆ ನೀಡಿದೆ.
ಈ ಕುರಿತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸುತ್ತೋಲೆ ಹೊರಡಿಸಿದೆ. ಕಡ್ಡಾಯವಾಗಿ ಸರಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವಂತೆ ಆದೇಶಿಸಲಾಗಿದೆ. ಒಂದು ವೇಳೆ ಶಿಕ್ಷಕರು ರಜೆ ನೆಪ ಹೇಳಿ ತರಗತಿಗಳನ್ನು ನಡೆಸದೇ ಗೈರು ಹಾಜರಾದರೆ ಅಂತಹ ಶಾಲೆಗಳ ಹಾಗೂ ಶಿಕ್ಷಕರ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಎಸೆಸೆಲ್ಸಿ ಅನುತ್ತೀರ್ಣರಾದವರಿಗೆ ಜೂ.20-27ರವರೆಗೆ ಎಸೆಸೆಲ್ಸಿ ಪೂರಕ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾವ ಶಾಲೆಗಳಲ್ಲಿ ಫಲಿತಾಂಶ ಕುಸಿತ ಕಂಡಿದೆಯೋ ಅಂತಹ ಶಾಲೆಗಳಲ್ಲಿ ವಿಶೇಷ ತರಗತಿಯನ್ನು ನಡೆಸಬೇಕು. ಪೂರಕ ಪರೀಕ್ಷೆ ಆರಂಭವಾಗುವವರೆಗೂ ಮಕ್ಕಳಿಗೆ ಪ್ರತಿ ವಿಷಯಕ್ಕೆ ಒಂದು ಗಂಟೆ ಕಡ್ಡಾಯ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ.
ಗಣಿತ, ವಿಜ್ಞಾನ, ಆಂಗ್ಲ ಭಾಷೆ ವಿಷಯಗಳನ್ನು ಕಡ್ಡಾಯವಾಗಿ ಒಂದು ಗಂಟೆಗಿಂತ ಹೆಚ್ಚು ಸಮಯ ಬೋಧನೆ ಮಾಡಬೇಕು. ವಿಶೇಷವಾಗಿ ನುರಿತ ಶಿಕ್ಷಕರು ಮಕ್ಕಳನ್ನು ತರಗತಿಗೆ ಹಾಜರಾಗುವಂತೆ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು. ಫಲಿತಾಂಶ ಹೆಚ್ಚಳಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದೆ.
ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಗಳಿಸಿರುವ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಯಾಗದಿದ್ದರೆ ಅಂತಹ ಶಾಲೆಗಳ ಮಾನ್ಯತೆ ರದ್ದುಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮೇ.16ರಂದು ಪ್ರಕಟಗೊಂಡ ಎಸೆಸೆಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಶೇ.2ರಷ್ಟು ಕುಸಿತ ಕಂಡಿದೆ. ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮಕೈಗೊಂಡರೂ ಫಲಿತಾಂಶ ಕುಸಿದಿರುವುದರಿಂದ ಸರಕಾರವನ್ನು ಚಿಂತೆಗೀಡು ಮಾಡಿದೆ. ಈ ವರ್ಷದಲ್ಲಿ ಮೂರು ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 52 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿರುವುದರಿಂದ ಸರಕಾರ ಈ ಕ್ರಮ ಕೈಗೊಳ್ಳಲಾಗಿದೆ.





