ವಿಂಡೀಸ್ ಆಯ್ಕೆಗಾರರ ವಿರುದ್ಧ ಗೇಲ್, ಬ್ರಾವೊ ಆಕ್ರೋಶ
ಹೊಸದಿಲ್ಲಿ, 20: ಮುಂದಿನ ತಿಂಗಳು ಆರಂಭವಾಗಲಿರುವ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕ ತಂಡಗಳನ್ನೊಳಗೊಂಡ ತ್ರಿಕೋನ ಏಕದಿನ ಸರಣಿಗೆ ತಮ್ಮನ್ನು ನಿರ್ಲಕ್ಷಿಸಿರುವುದಕ್ಕೆ ವೆಸ್ಟ್‌ಇಂಡೀಸ್‌ನ ಹಿರಿಯ ಕ್ರಿಕೆಟಿಗರಾದ ಕ್ರಿಸ್ ಗೇಲ್, ಡ್ವೇಯ್ನಿ ಬ್ರಾವೊ ಹಾಗೂ ಡರೆನ್ ಸಮ್ಮಿ ಆಯ್ಕೆಗಾರರ ವಿರುದ್ಧ ಕಿಡಿಕಾರಿದ್ದಾರೆ.
ಈ ಮೂವರು ಆಟಗಾರರು ವೆಸ್ಟ್‌ಇಂಡೀಸ್ ತಂಡ ಟ್ವೆಂಟಿ-20 ಚಾಂಪಿಯನ್ ಆಗಿದ್ದಾಗ ತಂಡದ ಭಾಗವಾಗಿದ್ದರು. ತ್ರಿಕೋನ ಸರಣಿಗೆ ಗುರುವಾರ ತಂಡ ಪ್ರಕಟಿಸಿದ್ದ ವಿಂಡೀಸ್ ಕ್ರಿಕೆಟ್ ಮಂಡಳಿ ಈ ಮೂವರನ್ನು ಹೊರಗಿಟ್ಟು ಕೀರನ್ ಪೊಲಾರ್ಡ್ ಹಾಗೂ ಸುನೀಲ್ ನರೇನ್‌ಗೆ ಅವಕಾಶ ನೀಡಿತ್ತು.
ಪೊಲಾರ್ಡ್ ಹಾಗೂ ನರೇನ್ ಈ ಹಿಂದೆ ಸರಣಿಗೆ ಫಿಟ್ ಆಗಿರಲಿಲ್ಲ. ಇದೀಗ ದಿಢೀರನೆ ತ್ರಿಕೋನ ಸರಣಿಗೆ ಫಿಟ್ ಆಗಿದ್ದೇಗೆ? ಈ ತಮಾಷೆಗೆ ಆಯ್ಕೆಗಾರರೇ ಉತ್ತರ ನೀಡಬೇಕು ಎಂದು ಬ್ರಾವೋ ಟ್ವೀಟ್ ಮಾಡಿದ್ದಾರೆ.
ಗೇಲ್ ಹಾಗೂ ಸಮ್ಮಿ ಆಯ್ಕೆಗಾರರ ವಿರುದ್ಧ್ದ ಟ್ವೀಟರ್‌ನ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೀರನ್ ಪೊಲಾರ್ಡ್ ಹಾಗೂ ಸುನೀಲ್ ನರೇನ್ ವೆಸ್ಟ್‌ಇಂಡೀಸ್‌ನ ತ್ರಿಕೋನ ಸರಣಿಗೆ ಆಯ್ಕೆಯಾಗಿದ್ದಾರೆ. ಇದು ಹೇಗೆ ಸಾಧ್ಯ. ವಿಂಡೀಸ್ ಕ್ರಿಕೆಟ್ ಮಂಡಳಿ ಸುನೀಲ್‌ರನ್ನು ದೇಶೀಯ ಸೂಪರ್ ಸರಣಿ ಆಡದಂತೆ ತಡೆದಿತ್ತು. ಇದೀಗ ಅವರನ್ನು ಆಯ್ಕೆ ಮಾಡಿದೆ. ಪೊಲಾರ್ಡ್ ತಂಡಕ್ಕೆ ಮರಳಿದ್ದು ಅಚ್ಚರಿ ಮೂಡಿಸಿದೆ ಎಂದು ಗೇಲ್ ಹಾಗೂ ಸಮ್ಮಿ ಹೇಳಿದ್ದಾರೆ







