ಭೂ ಮಾಫಿಯಾಗೆ ಸುಪ್ರೀಂ ಕೋರ್ಟ್ ಚಾಟಿ

ಸಾರ್ವಜನಿಕ ಉದ್ದೇಶಕ್ಕಾಗಿ ಅಥವಾ ವಸತಿ ಪ್ರದೇಶದ ಅಭಿವೃದ್ಧಿಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ರಾಜ್ಯ ಸರಕಾರಗಳು ಯಾವುದೇ ಕಾರಣಕ್ಕೂ ಈ ಭೂಮಿಯನ್ನು ಬಿಲ್ಡರ್‌ಗಳಿಗೆ ವರ್ಗಾಯಿಸಬಾರದೆಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ಕಟ್ಟಡ ನಿರ್ಮಾಪಕರಿಗೆ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂದು ನ್ಯಾಯಮೂರ್ತಿ ಅನಿಲ್ ಆರ್. ದವೆ ಮತ್ತು ಆದರ್ಶ ಕುಮಾರ್ ಗೋವಲ್ ಅವರನ್ನೊಳಗೊಂಡ ನ್ಯಾಯಪೀಠ ಈ ಕುರಿತು ಸವಿಸ್ತಾರವಾದ ಆದೇಶವನ್ನು ನೀಡಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಆ ಭೂಮಿಯನ್ನು ರೈತರಿಗೆ ಅಥವಾ ಮೂಲ ಮಾಲಕರಿಗೆ ವಾಪಸ್ ಮಾಡಬೇಕೆಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಜಮೀನನ್ನು ರಿಯಲ್ ಎಸ್ಟೇಟ್ ಮಾಫಿಯಾ ಕಬಳಿಸುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಈ ಎಚ್ಚರಿಕೆ ಸಕಾಲಿಕವಾಗಿದೆ. ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ ನಂತರ ಈ ಅಧಿಸೂಚನೆಯಿಂದ ತಮ್ಮ ಜಮೀನನ್ನು ಕೈಬಿಡಬೇಕೆಂದು ಕಟ್ಟಡ ನಿರ್ಮಾಪಕರು ಸಲ್ಲಿಸುವ ಅರ್ಜಿಗಳನ್ನು ಮಾನ್ಯ ಮಾಡುವ ಬಗ್ಗೆ ಪರಿಶೀಲನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇಶದಲ್ಲಿ ಜಾಗತೀಕರಣದ ಕರಾಳ ಶಕೆ ಆರಂಭಗೊಂಡ ನಂತರ ರೈತರ ಭೂಮಿಯನ್ನು ಲಪಟಾಯಿಸುವ ದಗಲುಬಾಜಿತನ ಹೆಚ್ಚಾಗಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ರೈತರಿಂದ ಭೂಮಿಯನ್ನು ಪಡೆದುಕೊಂಡು ಕೆಲ ಸಮಯ ಹಾಗೆಯೇ ಬಿಟ್ಟು ನಂತರ ವಶಪಡಿಸಿಕೊಂಡ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿ ರಿಯಲ್ ಎಸ್ಟೇಟ್ ಮಾಫಿಯಾ ಒಡಲಿಗೆ ಹಾಕುವ ಅವ್ಯವಹಾರದ ಬಗ್ಗೆ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ಹಾಗೂ ಕೈಗಾರಿಕಾ ವಲಯದ ರಚನೆಯ ಹೆಸರಿನಲ್ಲಿ ಮಾತ್ರವಲ, ಹಲವಾರು ಸರಕಾರಿ ಕಚೇರಿಗಳ ಸ್ಥಾಪನೆಯ ಉದ್ದೇಶಕ್ಕಾಗಿ ರೈತರಿಂದ ನೂರಾರು ಎಕರೆ ಭೂಮಿಯನ್ನು ಕಿತ್ತುಕೊಳ್ಳಲಾಯಿತು. ಈ ರೀತಿ ಕಿತ್ತುಕೊಂಡ ಭೂಮಿಯಲ್ಲಿ ವಸತಿ ಸಮುಚ್ಚಯವಾಗಲಿ, ಕೈಗಾರಿಕೆಗಳಾಗಲಿ ಸ್ಥಾಪನೆಯಾಗಲಿಲ್ಲ. ವಶಪಡಿಸಿಕೊಂಡ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ ಪರಿಣಾಮವಾಗಿ ನೂರಾರು ಎಕರೆ ಭೂಮಿ ರಿಯಲ್ ಎಸ್ಟೇಟ್ ಮಾಫಿಯಾ ಕೈವಶವಾಯಿತು. ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಇಂತಹ ಭಾರೀ ಹಗರಣ ನಡೆದಿದೆ. ಈ ಡಿನೋಟಿಫಿಕೇಶನ್ ಹಗರಣದ ಹಿನ್ನೆಲೆಯಲ್ಲಿ ಇಂದಿನ ಸರಕಾರದ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಲೋಕಾಯುಕ್ತದ ಕೆಂಗಣ್ಣಿಗೆ ಗುರಿಯಾಗಿದ್ದರು. ಪರಪ್ಪನ ಅಗ್ರಹಾರದ ಜೈಲಿಗೂ ಹೋಗಿ ಬಂದರು. ಬೆಂಗಳೂರು ಮಾತ್ರವಲ್ಲ, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮುಂತಾದ ಕಡೆ ಇಂತಹ ಭೂಹಗರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹವಾಗಿದೆ. ರೈತರಿಂದ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ನಿಗದಿತ ಉದ್ದೇಶಕ್ಕಾಗಿ ವಶಪಡಿಸಿಕೊಂಡು ಅದನ್ನು ಶ್ರೀಮಂತ ಕೋಟ್ಯಧಿಪತಿಗಳಿಗೆ ಬಿಟ್ಟುಕೊಡುವುದು ಸರಿಯಲ್ಲ. ಇದು ರೈತರ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ರಿಯಲ್ ಎಸ್ಟೇಟ್ ಮಾಫಿಯಾ ಎಷ್ಟು ಪ್ರಬಲವಾಗಿದೆ ಎಂದರೆ ಅದನ್ನು ಎದುರಿಸಿ ಯಾವ ಸರಕಾರವೂ ಸುರಕ್ಷಿತವಾಗಿ ಉಳಿಯುವ ಸ್ಥಿತಿಯಲ್ಲಿಲ್ಲ.
2003ರಿಂದ 2005ರ ಅವಧಿಯಲ್ಲಿ ಹರ್ಯಾಣದ ರೋಟಕ್‌ನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ವಸತಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ 800 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ನಂತರ ವಶಪಡಿಸಿಕೊಂಡ ಈ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳ ಮಡಿಲಿಗೆ ಹಾಕಿತು. ಇದರಿಂದ ರೊಚ್ಚಿಗೆದ್ದ ಭೂಮಿ ಕಳೆದುಕೊಂಡ ರೈತರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಇದಕ್ಕೂ ಮುನ್ನ ಪಂಜಾಬ್-ಹರ್ಯಾಣ ಹೈಕೋರ್ಟ್ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿತು. ಆದರೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶದಲ್ಲಿ ಮಾರ್ಪಾಟು ಮಾಡಿ ವಶಪಡಿಸಿಕೊಂಡ ಭೂಮಿಯನ್ನು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಯವರಿಂದ ವಾಪಸ್ ಪಡೆದು ಅದರ ಮೂಲ ಮಾಲಕರಾದ ರೈತರಿಗೆ ನೀಡಬೇಕೆಂದು ಆದೇಶ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಭೂಮಿಯನ್ನು ಕಳೆದುಕೊಂಡ ಲಕ್ಷಾಂತರ ರೈತರಿಗೆ ಹೊಸ ಭರವಸೆಯನ್ನು ಮೂಡಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುತ್ತಿರುವುದರಿಂದ ಕೃಷಿ ಉತ್ಪಾದನೆಯಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಈಗಿರುವ ಕೇಂದ್ರ ಸರಕಾರದ ನಿಲುವು ಕೂಡಾ ಉದ್ಯಮಪತಿಗಳಿಗೆ ಪೂರಕವಾಗಿದೆ. ಭೂಸ್ವಾಧೀನ ಕಾಯ್ದೆಯಲ್ಲಿ ತಿದ್ದುಪಡಿ ತಂದು ರೈತರ ಒಪ್ಪಿಗೆ ಇಲ್ಲದೆ ಅವರ ಭೂಮಿಯನ್ನು ಕಿತ್ತುಕೊಂಡು ಕೈಗಾರಿಕೋದ್ಯಮಿಗಳಿಗೆ ನೀಡಲು ಹುನ್ನಾರ ನಡೆಸಿದೆ. ಆದರೆ, ರಾಜ್ಯಸಭೆಯಲ್ಲಿ ಆಳುವ ಪಕ್ಷಕ್ಕೆ ಬಹುಮತ ಇಲ್ಲದೆ ಇರುವುದರಿಂದ ಈ ಭೂಸ್ವಾಧೀನ ತಿದ್ದುಪಡಿ ಮಸೂದೆ ನನೆಗುದಿಗೆ ಬಿದ್ದಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಇನ್ನಾದರೂ ನಮ್ಮ ಸರಕಾರಗಳು ರೈತರ ಬದುಕಿನೊಂದಿಗೆ ಕಪಿಚೇಷ್ಠೆ ಮಾಡುವುದನ್ನು ಕೈಬಿಡಬೇಕು. ಒಂದು ಕಾಲದಲ್ಲಿ ಕೃಷಿಪ್ರಧಾನ ದೇಶವಾಗಿದ್ದ ಭಾರತ ಇಂದು ಕೃಷಿ ಉತ್ಪಾದನೆಯಲ್ಲಿ ಹಿಂದುಳಿಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಚುನಾಯಿತ ಸರಕಾರಗಳು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಗತ್ಯವಾಗಿದೆ







