ರೈತರಿಗೆ ಅಡಚಣೆರಹಿತ ವಿದ್ಯುತ್ ಒದಗಿಸಲು ಬದ್ಧ: ಡಿಕೆಶಿ
ಸುಬ್ರಹ್ಮಣ್ಯ ವಿದ್ಯುತ್ ಉಪಘಟಕ ಉದ್ಘಾಟನೆ

ಸುಬ್ರಹ್ಮಣ್ಯ, ಮೇ 20: ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ನಡೆಸಲು ಸರಕಾರ ಹೆಚ್ಚಿನ ಹಣ ವ್ಯಯಿಸುತ್ತಿದೆ. ರಾಜ್ಯದಲ್ಲಿ ಮಳೆಯಾದಲ್ಲಿ ವಿದ್ಯುತ್ ಪೂರೈಕೆ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಒಂದು ದಿನ ಮಳೆಯಾದಲ್ಲಿ ಸರಕಾರದ ಖಜಾನೆಗೆ 10 ಕೋ.ರೂ. ಆದಾಯ ಬರುತ್ತದೆ. ರೈತರಿಗೆ ತಡೆರಹಿತ ವಿದ್ಯುತ್ ಪೂರೈಸಲು ಸರಕಾರ ಬದ್ಧವಿದೆ ಎಂದು ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಮಂಗಳೂರು ವಿದ್ಯುತ್ ಸರಬರಾಜು ಮಂಡಳಿ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರ್ಮಾಣಗೊಂಡ 33/11 ಕೆವಿ ವಿದ್ಯುತ್ ಉಪಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ವಲ್ಲೀಶ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ಪೂರೈಕೆಗೆ ಆವಶ್ಯಕವಿರುವ ಕ್ರಮ ಕೈಗೊಳ್ಳಲು ಸರಕಾರ ಕಟಿಬದ್ಧವಾಗಿದೆ. ಜಿಲ್ಲೆಯಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಈಗಾಗಲೇ ಹಲವು ಕಡೆಗಳಲ್ಲಿ ಉಪಕೇಂದ್ರ ಘಟಕ ಸ್ಥಾಪಿಸಲಾಗಿದೆ. ಇನ್ನೂ ಕೆಲವೆಡೆ ಘಟಕ ಸ್ಥಾಪನೆ ಕುರಿತಂತೆ ಬೇಡಿಕೆಗಳಿವೆ ಎಂದರು. ಆಶೀರ್ವಚನ ನೀಡಿ ಮಾತನಾಡಿದ ಶ್ರೀಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಯಾತ್ರಾ ಕ್ಷೇತ್ರ ಕುಕ್ಕೆಯಲ್ಲಿ ವಿದ್ಯುತ್ ಉಪಘಟಕ ಸ್ಥಾಪನೆಯಿಂದ ಜನರ ಬಹುಕಾಲದ ಸಮಸ್ಯೆ ಈಡೇರಿದೆ. ಪ್ರಾಕೃತಿಕ ತೊಂದರೆಗಳಿಂದ ತಂತಿಗಳು ಹಾದು ಹೋದ ದಾರಿ ಮಧ್ಯೆ ಆಗಾಗ್ಗೆ ಮರಗಳು ಬಿದ್ದು ತಂತಿಗಳು ತುಂಡಾಗಿ ಪುನರಾವರ್ತನೆ ಆಗುತ್ತಿರುತ್ತದೆ. ಇದಕ್ಕೆ ಶಾಶ್ವತ ಪರಿಹಾರಕ್ಕೆ ಚಿಂತನೆಗಳು ಅಗತ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ವಿದ್ಯುತ್ ಬಳಕೆ ಪರಿಣಾಮಕಾರಿ. ಬದಲಾದ ಕಾಲಘಟ್ಟದಲ್ಲಿ ಇಂದಿನ ಜನತೆ ವಿದ್ಯುತ್ ಬಳಕೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಕೆಲವೊಮ್ಮೆ ವಿದ್ಯುತ್ ಸರಬರಾಜು ಸಂಪರ್ಕ ಕಲ್ಪಿಸುವ ವೇಳೆ ತಂತಿ ಎಳೆಯುವ ಸಂದರ್ಭ ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿದೆ ಎಂಬ ಆರೋಪವಿದೆ. ಇದು ಸಹಜ. ಅರಣ್ಯ ಇಲಾಖೆ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಅರಣ್ಯೇತರ ಉದ್ದೇಶಕ್ಕೆ ಜಾಗ ನೀಡುವ ಸಂದರ್ಭ ಇಲಾಖೆಯ ಅನುಮತಿ ಪಡೆಯಬೇಕು. ಇಲಾಖೆಯ ಇತಿಮಿತಿಯೊಳಗೆ ಅನುಮತಿ ನೀಡಬೇಕಾಗುತ್ತದೆ ಎಂದರಲ್ಲದೆ, ತಂತಿಗಳು ಹಾದು ಹೋಗಿರುವ ಕಾಡು ದಾರಿಗಳಲ್ಲಿ ಭೂಗತ ಕೇಬಲ್‌ನಂತಹ ಆಧುನಿಕ ತಂತ್ರಜ್ಞಾನ ಬಳಸಬಹುದು ಎಂದು ಅಭಿಪ್ರಾಯಪಟ್ಟರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಚನಿಯ ಕುಲ್ತಡ್ಕ, ಉಪಾಧ್ಯಕ್ಷೆ ಸುಬೋಧಾ ರೈ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯ ಪ್ರಭಾ, ಕೆಪಿಸಿಸಿ ಸದಸ್ಯ ಡಾ. ರಘು, ಜಿಪಂ ಸದಸ್ಯೆ ಆಶಾ ತಿಮ್ಮಪ್ಪ, ತಾಪಂ ಸದಸ್ಯ ಅಶೋಕ ನೆಕ್ರಾಜೆ, ಗ್ರಾಪಂ ಉಪಾಧ್ಯಕ್ಷ ದಿನೇಶ್ ಬಿ.ಎನ್., ಕವಿಪ್ರನಿನಿ ನಿರ್ದೇಶಕ ಎಸ್. ಸುಮಂತ್, ತಾಂತ್ರಿಕ ನಿರ್ದೇಶಕ ರಾಮಕೃಷ್ಣ, ಮೆಸ್ಕಾಂ ಸಮಿತಿಯ ಜಯಣ್ಣ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಬಿ.ಸಿ. ವಸಂತ ಮತ್ತಿತರರು ಉಪಸ್ಥಿತರಿದ್ದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಸ್ವಾಗತಿಸಿದರು. ನಾರಾಯಣ ಪೂಜಾರಿ ವಂದಿಸಿದರು.







