ಡಿಸಿ ಮನ್ನಾ ಭೂಮಿ ಒತ್ತುವರಿ ವಿರುದ್ಧ ಕ್ರಮ: ತಹಶೀಲ್ದಾರ್

ಉಡುಪಿ, ಮೇ 20: ಒತ್ತುವರಿ ಮಾಡಲಾಗಿರುವ ಡಿಸಿ ಮನ್ನಾ ಭೂಮಿ ಯನ್ನು ವಶಪಡಿಸಿಕೊಳ್ಳಲು ತ್ವರಿತಗತಿಯಲ್ಲಿ ಕ್ರಮ ಜರಗಿಸಲಾಗುವುದು. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗುವುದು. ಆಯಾ ಗ್ರಾಪಂಗಳಲ್ಲಿ ಒತ್ತುವರಿ ಮಾಡಿರುವ ಭೂಮಿಗಳ ಕುರಿತು ವರದಿ ಸಲ್ಲಿಸುವಂತೆ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಲಾಗುವುದು ಎಂದು ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ನಡೆದ ಉಡುಪಿ ತಾಲೂಕು ದಲಿತರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ತಾಲೂಕಿನ ಎಂಟು ಗ್ರಾಮಗಳಲ್ಲಿ ಡಿಸಿ ಮನ್ನಾ ಭೂಮಿ ಖಾಲಿ ಉಳಿದಿದ್ದು, ಇದನ್ನು ನಿವೇಶನವನ್ನಾಗಿಸಿ ತಲಾ ಐದು ಸೆಂಟ್ಸ್ ಜಾಗವನ್ನು ಎಸ್ಸಿ/ಎಸ್ಟಿ ಸಮುದಾಯದವರಿಗೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾವಂಜೆ ಗ್ರಾಪಂನಲ್ಲಿ 6 ಎಕರೆ ಜಾಗವನ್ನು ಈಗಾಗಲೇ ನಿವೇಶನವನ್ನಾಗಿ ಮಾಡಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಹಂಚಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.
ತೆಂಕನಿಡಿಯೂರಿನಲ್ಲಿರುವ ಆರು ಎಕರೆ ಡಿಸಿ ಮನ್ನಾ ಭೂಮಿಯನ್ನು ಮಾರಾಟ ಮಾಡಲಾಗಿದ್ದು, ಇದರ ವಿರುದ್ಧ ಕ್ರಮ ಜರಗಿಸುವಂತೆ ದಲಿತ ಮುಖಂಡ ರಮೇಶ್ ಕೋಟ್ಯಾನ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಡಿಸಿ ಮನ್ನಾ ಭೂಮಿಯನ್ನು ಪರಭಾರೆ ಮಾಡಲು ಕಾನೂನಿನಲ್ಲಿ ಯಾರಿಗೂ ಅವಕಾಶ ಇಲ್ಲ. ಪರಭಾರೆ ಮಾಡಿದ್ದರೂ ಅದನ್ನು ವಾಪಸ್ ಸರಕಾರ ವಶಕ್ಕೆ ತೆಗೆದುಕೊಳ್ಳಲು ಅವಕಾಶ ಇದೆ. ಈ ಭೂಮಿಯನ್ನು ಮಾರಾಟ ಮಾಡಿ ನೋಂದಾವಣೆ ಮಾಡಿರುವ ಕುರಿತು ಹಿರಿಯ ನೋಂದಾವಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ವಿವಾದಾಸ್ಪದ ಪ್ರಕರಣವು ಇದೀಗ ತಹಶೀಲ್ದಾರ್ ಕೋರ್ಟ್‌ನಲ್ಲಿದೆ. ಈ ಭೂಮಿಯನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಡುಪಿ ತಾಪಂ ಇಒ ಶೇಷಪ್ಪ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ತಿಪ್ಪೆಸ್ವಾಮಿ, ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್, ದಲಿತ ಮುಖಂಡರಾದ ವಿಶ್ವನಾಥ ಪೇತ್ರಿ, ಸುಂದರ ಮಾಸ್ತರ್, ಶಂಕರ್‌ದಾಸ್, ಮಂಜುನಾಥ್ ಗಿಳಿಯಾರು, ಸುಂದರ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಪ್ರಾಕೃತಿಕ ವಿಕೋಪ ನಷ್ಟಕ್ಕೆ ಪರಿಹಾರ: ಪ್ರಾಕೃತಿಕ ವಿಕೋಪದಿಂದ ಒಂದು ವಾರದಲ್ಲಿ ಉಡುಪಿ ತಾಲೂಕಿನಲ್ಲಿ 82 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಐದು ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಇದರಲ್ಲಿ ಭಾಗಶಃ ಹಾನಿಯಾಗಿರುವ 12 ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆಗಳಿಗೆ ತಲಾ 5,200ರೂ. ತಾತ್ಕಾ ಲಿಕ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು, ಎರಡು ದಿನಗಳಲ್ಲಿ ಆಯಾ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗುವುದು. ಕೋಟದಲ್ಲಿ ಸಂಪೂರ್ಣವಾಗಿ ಕುಸಿದ ಕೊರಗ ಸಮುದಾಯದ ಮನೆಗೆ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಮರ ತೆರವುಗೊಳಿಸುವಂತೆ ಗ್ರಾಪಂಗಳಿಗೆ ಬಂದ ಅರ್ಜಿಗೆ ಕೂಡಲೇ ಪರವಾನಿಗೆ ನೀಡುವಂತೆ ತಾಪಂ ಇಒಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದರು.







