ಕಾಂಗ್ರೆಸ್ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದ ಉಪಚುನಾವಣೆಗಳ ಸೋಲು
ಹೊಸದಿಲ್ಲಿ,ಮೇ 20: ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಮಣ್ಣು ಮುಕ್ಕಿರುವ ಕಾಂಗ್ರೆಸ್ ಪಕ್ಷದ ಸಂಕಷ್ಟವನ್ನು ಗುಜರಾತ್,ತೆಲಂಗಾಣ ಮತ್ತು ಉತ್ತರ ಪ್ರದೇಶಗಳಲ್ಲಿ ನಡೆದ ಉಪಚುನಾವಣೆಗಳಲ್ಲಿನ ಸೋಲು ಇನ್ನಷ್ಟು ಹೆಚ್ಚಿಸಿದೆ. ಮೇ 16ರಂದು ನಡೆದಿದ್ದ ಉಪಚುನಾವಣೆಗಳ ಮತಎಣಿಕೆಯೂ ಬುಧವಾರ ನಡೆದಿತ್ತು.
ಗುಜರಾತ್ ಮತ್ತು ತೆಲಂಗಾಣಗಳಲ್ಲಿ ತಲಾ ಒಂದು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಪಕ್ಷವು ವಿಫಲಗೊಂಡಿದ್ದರೆ,ಉತ್ತರ ಪ್ರದೇಶದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಅದರ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ತನ್ನ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ತುರಾ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದೆ. ಅಲ್ಲಿ ಮಾಜಿ ಸ್ಪೀಕರ್ ಪಿ.ಎ.ಸಂಗ್ಮಾ ಅವರ ಪುತ್ರ ಕಾನ್ರಾಡ್ ಕೆ.ಸಂಗ್ಮಾ ಅವರು ತನ್ನ ಏಕೈಕ ಪ್ರತಿಸ್ಪರ್ಧಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರ ಪತ್ನಿ ದಿಕ್ಕಾಂಚಿ ಡಿ ಶಿರಾ ಅವರಿಗೆ 1.92 ಲಕ್ಷ ಮತಗಳ ಭಾರೀ ಅಂತರದಿಂದ ಸೋಲನ್ನುಣಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಶದಲ್ಲಿದ್ದ 14 ವಿಧಾನಸಭಾ ಕ್ಷೇತ್ರಗಳ ಪೈಕಿ 13ನ್ನು ಉಳಿಸಿಕೊಳ್ಳುವಲ್ಲಿ ಪಕ್ಷವು ವಿಫಲಗೊಂಡಿದೆ.
ಉತ್ತರ ಪ್ರದೇಶದ ಬಿಲಾರಿ ಮತ್ತು ಜಂಗಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ಎಸ್‌ಪಿ ಬಿಜೆಪಿಯ ನಿಕಟ ಪ್ರತಿಸ್ಪರ್ಧಿಗಳನ್ನು ಸೋಲಿಸುವ ಮೂಲಕ ಈ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇವೆರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡಿದ್ದಾರೆ.
ಗುಜರಾತ್‌ನ ತಲಾಲಾ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯು ಕಾಂಗ್ರೆಸ್‌ನಿಂದ ಕಸಿದುಕೊಂಡಿದ್ದರೆ,ಅತ್ತ ತೆಲಂಗಾಣದ ಪಾಲೈರ್ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವು ಟಿಆರ್‌ಎಸ್‌ಗೊಪ್ಪಿಸಿದೆ. ಜಾರ್ಖಂಡ್‌ನಲ್ಲಿ ಗೊಡ್ಡಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಿದ್ದರೆ, ಪಂಕಿ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.





