ಹೆಬ್ರಿ: ಬಿರುಗಾಳಿಗೆ ಉರುಳಿದ ಮರಗಳು

ಹೆಬ್ರಿ, ಮೇ 20: ಹೆಬ್ರಿ ಪರಿಸರದಲ್ಲಿ ಕಳೆದೆರಡು ದಿನಗಳಿಂದ ಸಿಡಿಲು ಮಳೆ ಸಹಿತ ಬೀಸಿದ ಭಾರೀ ಬಿರುಗಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಹೆಬ್ರಿ, ಮುದ್ರಾಡಿ, ಬಚ್ಚಪ್ಪು, ಸೀತಾನದಿ, ಸೋಮೇಶ್ವರ ಸೇರಿದಂತೆ ಹಲವೆಡೆ ಹಲವಾರು ಮರಗಳು ನೆಲಕ್ಕುರುಳಿವೆ. 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಸೀತಾನದಿ, ಸೋಮೇಶ್ವರ, ಬಚ್ಚಪ್ಪು ಪರಿಸರದಲ್ಲಿ ನೂರಾರು ಬೃಹತ್ ಮರಗಳು ಗಾಳಿಗೆ ಉರುಳಿಬಿದ್ದಿವೆ. ಹೆಬ್ರಿ ಸರಕಾರಿ ಸಮುದಾಯ ಆಸ್ಪತ್ರೆಯ ಶವಾಗಾರದ ಮೇಲೆ ಮಾವಿನ ಮರ ಉರುಳಿ ಬಿದ್ದು ಶವಾಗಾರ ಸಂಪೂರ್ಣ ಹಾನಿಯಾಗಿದೆ. ಹೆಬ್ರಿಯ ಬಚ್ಚಪ್ಪು ಹಿರಿಯಣ್ಣ ನಾಯ್ಕು ಮನೆಗೆ ಅಡಿಕೆ ಮರಗಳು ಬಿದ್ದು ಹಾನಿಯಾಗಿದೆ. ಬಚ್ಚಪ್ಪು ಶೀನಾ ನಾಯ್ಕುರ ಮನೆಯ ಮಾಡಿನ ತಗಡು ಶೀಟುಗಳು ಹಾರಿ ಹೋಗಿ ಹಾನಿಯಾಗಿದೆ. ಹೆಬ್ರಿ ಮುದ್ರಾಡಿ ಪರಿಸರದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಮುದ್ರಾಡಿಯ ಟ್ವಿಂಕಲ್ ರಬ್ಬರ್ ನರ್ಸರಿಯ 2,000ಕ್ಕೂ ಹೆಚ್ಚು ರಬ್ಬರ್ ಗಿಡಗಳು ಮುರಿದುಬಿದ್ದಿವೆ. ಮುದ್ರಾಡಿ, ಹೆಬ್ರಿಯ ಗೇರುಬೀಜ ಕಾರ್ಖಾನೆ, ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯ ಸಹಿತ ಕಟ್ಟಡಗಳಿಗೆ ಹಾನಿಯಾಗಿದೆ. ‘ಇದೊಂದು ಭಯಂಕರ ಬಿರುಗಾಳಿ. ಪರಿಸರದಲ್ಲಿ ಇಂತಹ ಬಿರುಗಾಳಿ ತಾನು ಕಂಡಿಲ್ಲ’ ಎಂದು ಘಟನಾ ಸ್ಥಳದಲ್ಲಿ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ನುಡಿದರು.
300ಕ್ಕೂ ಅಧಿಕ ವಿದ್ಯುತ್ ಕಂಬ ಧರೆಗೆ: ಹೆಬ್ರಿ, ಮುದ್ರಾಡಿ, ಸೀತಾನದಿ, ಬಚ್ಚಪ್ಪುಸೇರಿದಂತೆ ಹೆಬ್ರಿ ಪರಿಸರದಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಜೂನಿಯರ್ ಇಂಜಿನಿಯರ್ ಸಂದೀಪ್ ನೇತೃತ್ವದ ತಂಡ ವಿದ್ಯುತ್ ಸಂಪರ್ಕದ ದುರಸ್ತಿ ಕಾರ್ಯ ನಡೆಸುತ್ತಿವೆ. ಇನ್ನೂ ನಾಲ್ಕು ದಿನ ಹೆಬ್ರಿ ಪರಿಸರದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.







