ಭಾರತದ ಶೇ.79ರಷ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ: ಸಮೀಕ್ಷೆ
ಹೊಸದಿಲ್ಲಿ, ಮೇ 21: ಭಾರತದ ಐವರು ಮಹಿಳೆಯರ ಪೈಕಿ ನಾಲ್ವರು(ಶೇ.79) ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಇಲ್ಲವೇ ಹಿಂಸೆಗೆ ತುತ್ತಾಗುತ್ತಿದ್ದಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಆ್ಯಕ್ಷನ್ ಏಯ್ಡೆ ಯುಕೆ ವರದಿಯ ಪ್ರಕಾರ ಭಾರತ, ಯುಕೆ, ಥಾಯ್ಲೆಂಡ್ ಹಾಗೂ ಬ್ರೆಝಿಲ್ನಲ್ಲಿ ನಡೆಸಿದ ಸರ್ವೇಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಭಾರತ, ಬ್ರೆಝಿಲ್, ಥಾಯ್ಲೆಂಡ್ ಹಾಗೂ ಯುಕೆಯ ಪ್ರಮುಖ ನಗರಗಳಲ್ಲಿ 16 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ 2,500 ಮಹಿಳೆಯರ ಸರ್ವೇ ನಡೆಸಲಾಗಿದೆ. ಭಾರತದ ಶೇ. 84ರಷ್ಟು ಮಹಿಳೆಯರು 25 ರಿಂದ 35ರ ಹರೆಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಪೈಕಿ ಶೇ. 82ರಷ್ಟು ಪೂರ್ಣಕಾಲಿಕ ಉದ್ಯೋಗಿಗಳು ಹಾಗೂ ಶೇ. 68 ವಿದ್ಯಾರ್ಥಿಗಳು ಇದ್ದಾರೆ.
ಬ್ರೆಝಿಲ್ನಲ್ಲಿ ಶೇ.89, ಥಾಯ್ಲೆಂಡ್ನಲ್ಲಿ ಶೇ.86 ಹಾಗೂ ಥಾಯ್ಲೆಂಡ್ನಲ್ಲಿ ಶೇ.75ರಷ್ಟು ಮಹಿಳೆಯರು ಬೀದಿಗಳಲ್ಲಿ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಆಘಾತಕಾರಿ ವಿಷಯ. ನಾಲ್ಕು ದೇಶಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಬಡ ಮಹಿಳೆಯರು ನಗರಗಳಲ್ಲಿ ಹೆಚ್ಚು ಹಿಂಸೆ ಇಲ್ಲವೇ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಸಾರ್ವಜನಿಕ ಬಸ್ಸು,ರೈಲುಗಳಲ್ಲಿ ಪ್ರಯಾಣಿಸುವಾಗ ಲೈಂಗಿಕ ಕಿರುಕುಳ ಎದುರಾಗುವ ಅಪಾಯ ಜಾಸ್ತಿ ಎಂದು ಭಾರತದ ಮಹಿಳೆಯರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.