ಪಾಸ್ ಪೋರ್ಟ್ ಅರ್ಜಿಗೆ ತಂದೆಯ ಹೆಸರು ಕಡ್ಡಾಯವಲ್ಲ

ಹೊಸದಿಲ್ಲಿ, ಮೇ 21 :ಕೆಲವೊಂದು ಪ್ರಕರಣಗಳಲ್ಲಿ ಮಗುವಿನ ಹೆಸರಿನಲ್ಲಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು ಕೇವಲ ತಾಯಿಯ ಹೆಸರಿದ್ದರೆ ಸಾಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ತಂದೆಯ ಹೆಸರು ಉಲ್ಲೇಖಿಸದೆ ಕೇವಲ ತಾಯಿಯ ಹೆಸರು ತಿಳಿಸಲಾಗಿರುವ ಮಗುವೊಂದರ ಪಾಸ್ ಪೋರ್ಟ್ ಅರ್ಜಿಯನ್ನು ಸ್ವೀಕರಿಸುವಂತೆಯೂ ದೆಹಲಿ ಹೈಕೋರ್ಟ್ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ನಿರ್ದೇಶನ ನೀಡಿದೆ.
ತಂದೆ ಇಲ್ಲದ ಸಂದರ್ಭಗಳಲ್ಲಿ ತಾಯಿಯೇ ಮಗುವಿನ ಸಹಜ ಪೋಷಕಿಯಾಗಿರುವುದರಿಂದ ಅರ್ಜಿಯಲ್ಲಿ ಆಕೆಯ ಹೆಸರಿದ್ದರಷ್ಟೇ ಸಾಕು ಎಂದು ಕೋರ್ಟ್ ಹೇಳಿದೆ.
‘ಕಾನೂನಿ ಪ್ರಕಾರ ತಂದೆಯ ಹೆಸರು ಉಲ್ಲೇಖಿಸಲೇ ಬೇಕಾದ ಸಂದರ್ಭಗಳನ್ನು ಹೊರತು ಪಡಿಸಿ ಇತರ ಪ್ರಕರಣಗಳಲ್ಲಿ ಅದನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
‘‘ಇಂದಿನ ಸನ್ನಿವೇಶಗಳಲ್ಲಿ ಒಂಟಿ ತಾಯಂದಿರ ಸಂಖ್ಯೆ ಅನೇಕ ಕಾರಣಗಳಿಂದ ಹೆಚ್ಚುತ್ತಿದೆ. ಅವಿವಾಹಿತ ತಾಯಂದಿರು, ಲೈಂಗಿಕ ಕಾರ್ಯಕರ್ತರು, ಬಾಡಿಗೆ ತಾಯಂದಿರು, ರೇಪ್ ಸಂತ್ರಸ್ತರು, ತಂದೆಯಿಂದ ತ್ಯಜಿಸಲ್ಪಟ್ಟ ಮಕ್ಕಳ ಕಾರಣಗಳಿಂದ ಒಂಟಿ ತಾಯಂದಿರ ಸಂಖ್ಯೆ ಹೆಚ್ಚುತ್ತಿದೆಯೆಂದೂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ.
ಕೋರ್ಟ್ ವಿಚಾರಣೆ ನಡೆಸುತ್ತಿದ್ದ ನಿರ್ದಿಷ್ಟ ಪ್ರಕರಣವೊಂದರಲ್ಲಿ ಮಗುವಿಗೆ 2005 ಹಾಗೂ 2011ರಲ್ಲಿ ತಂದೆಯ ಹೆಸರಿಲ್ಲದ ಅರ್ಜಿಯ ಮುಖಾಂತರವೇ ಪಾಸ್ ಪೋರ್ಟ್ ನೀಡಲಾಗಿದ್ದರಿಂದ ತಂದೆಯ ಹೆಸರು ಕಾನೂನಾತ್ಮಕವಾಗಿ ಅಗತ್ಯವಿಲ್ಲ ಬದಲಾಗಿ ಪ್ರಕ್ರಿಯೆ ಪೂರೈಸುವ ಭಾಗವಷ್ಟೇ ಆಗಿದೆ ಹಾಗೂ ಇದೇ ಕಾರಣಕ್ಕೆಆಕೆಯ ಅರ್ಜಿಯನ್ನು ತಿರಸ್ಕರಿಸುವಂತಿಲ್ಲವೆಂದೂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಅರ್ಜಿ ಸಲ್ಲಿಸಿದ ಮಹಿಳೆ ತನಗೆ ವಿವಾಹ ವಿಚ್ಛೇದನವಾಗಿರುವುದಾಗಿಯೂ ಮಗು ಹುಟ್ಟಿದಾಗಿನಿಂದ ತಾನೇ ಆಕೆಯ ಆರೈಕೆ ಮಾಡಿರುವುದರಿಂದ ತಂದೆಯ ಹೆಸರಿಲ್ಲದೆಯೇ ತನ್ನ ಮಗಳಿಗೆ ಪಾಸ್ ಪೋರ್ಟ್ ನೀಡಬೇಕೆಂದು ಕೋರಿದ್ದಳು.







