ನಿದ್ದೆಗೆ ಜಾರಿದ ಡ್ರೈವರ್, ಟ್ಯಾಕ್ಸಿ ಚಲಾಯಿಸಿದ ಪ್ರಯಾಣಿಕ!

ಹೊಸದಿಲ್ಲಿ, ಮೇ 21: ಗುರ್ಗಾಂವ್ ನಿವಾಸಿ ಐಶಾನ್ ಗಿಲ್ ಎಂಬಾತ ಮಧ್ಯರಾತ್ರಿ 12:30ಕ್ಕೆ ದಕ್ಷಿಣ ದಿಲ್ಲಿಯ ಡಿಫೆನ್ಸ್ ಕಾಲೊನಿಯಿಂದ ತನ್ನ ನಿವಾಸವಿರುವ ಡಿಎಲ್‌ಎಫ್ ಫೇಸ್-1ಕ್ಕೆ ತೆರಳಲು ಉಬೇರ್ ಕ್ಯಾಬ್‌ನ್ನು ಬುಕ್ ಮಾಡಿದ್ದರು. ಮಾರ್ಗಮಧ್ಯದಲ್ಲೇ ಚಾಲಕ ನಿದ್ದೆಗೆ ಜಾರಿಗೆ ಕಾರಣ ಅವರೇ ಕಾರನ್ನು ಚಲಾಯಿಸಿಕೊಂಡು ಮನೆಗೆ ಹೋಗಬೇಕಾಯಿತು.
ಗಿಲ್ ಮೇ 16ರಂದು ತನಗಾದ ಅನುಭವವನ್ನು 9 ಸೆಕೆಂಡ್‌ಗಳ ವಿಡಿಯೋದಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕ್ಯಾಬ್ ಚಾಲಕರ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಫೈನಾನ್ಸ್ ವಿಶ್ಲೇಷಕರಾಗಿರುವ ಗಿಲ್ ಕ್ಯಾಬ್ ಏರಿ ಮನೆಯತ್ತ ಪ್ರಯಾಣಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ನಿಯಂತ್ರಣ ತಪ್ಪಿದ ಡ್ರೈವರ್ ಡಿವೈಡರ್‌ಗೆ ಡಿಕ್ಕಿ ಹೊಡೆದ. ಕೂಡಲೇ ಎಚ್ಚೆತ್ತುಕೊಂಡ ಪ್ರಯಾಣಿಕ ಗಿಲ್, ಡ್ರೈವರ್‌ನನ್ನು ಪ್ರಯಾಣಿಕನ ಸೀಟಿನಲ್ಲಿ ಕೂರಿಸಿ ತಾನೇ ಕಾರು ಚಲಾಯಿಸಿದರು.
ವಿಪರೀತ ಮಾತ್ರೆಗಳನ್ನು ಸೇವಿಸಿದ್ದ ಕ್ಯಾಬ್ ಡ್ರೈವರ್ ನಿದ್ದೆಯ ಮಂಪರಿನಲ್ಲಿದ್ದ. ನನಗೆ ಮನೆಗೆ ತೆರಳಲು ಅರ್ಧಗಂಟೆಗೂ ಅಧಿಕ ಸಮಯ ತಗಲಿದರೂ, ಯಾವುದೇ ದೂರು ನೀಡದೇ 500 ರೂ.ವನ್ನು ಡ್ರೈವರ್‌ನ ಕಿಸೆಗೆ ಹಾಕಿ ಮನೆಯ ಹಾದಿ ಹಿಡಿದೆ ಎಂದು ಗಿಲ್ ತನ್ನ ಕಹಿ ಅನುಭವ ಹಂಚಿಕೊಂಡಿದ್ದಾರೆ.







