ಪಿಲಿಕುಳದಲ್ಲಿ ವಸಂತೋತ್ಸವ 2016 ಉದ್ಘಾಟನೆ
ರಾಜ್ಯದ 20 ಜಿಲ್ಲೆಗಳಲಿ ಮಾವು ಮೇಳ ಹಮ್ಮಿಕೊಳ್ಳಲಾಗುವುದು -ಕಮಲಾಕ್ಷಿ ರಾಜಣ್ಣ

ಮಂಗಳೂರು, ಮೇ 21: ರಾಜ್ಯದ 20 ಜಿಲ್ಲೆಗಳಲ್ಲಿ ಮಾವು ಮೇಳ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ತಿಳಿಸಿದರು .
ಅವರು ಇಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿ.ಬೆಂಗಳೂರು ಹಾಗೂ ಡಾ.ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮ ವತಿಯಿಂದ ಮೇ 21ಮತ್ತು 22ರಂದು ಪಿಲಿಕುಲ ಅರ್ಬನ್ ಹಾಥ್ ನಲ್ಲಿ ಹಮ್ಮಿಕೊಳ್ಳಲಾಗಿರುವ ವಸಂತೋತ್ಸವ -2016 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ರಾಜ್ಯ ಮೀನುಗಾರಿಕೆ ,ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಇಂದು ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕದ 18 ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ.ಈ ಹಿನ್ನೆಲೆಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಇದರ ವಿಸ್ತರಣೆಗಾಗಿ ಮಾವು ಮೇಳ 20 ಜಿಲ್ಲೆಗಳಲ್ಲಿ ನಡೆ3ಸಲಾಗುವುದು. ರಾಜ್ಯದಲ್ಲಿ 14ಲಕ್ಷ ಟನ್ ಮಾವು ಬೆಳೆ ಬೆಳೆಯಲಾಗುತ್ತಿದೆ.
ಪ್ರಪಂಚದಲ್ಲಿಯೇ ಹಣ್ಣು ಗಳ ಉತ್ಫಾದನೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಕರ್ನಾಟಕ ಮೂರನೆ ಸ್ಥಾನದಲ್ಲಿದೆ. ರೈತರಿಂದ ಮಾವಿನ ಹಣ್ಣು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುವಂತಾಗಲು ಮಾವು ಮೇಳವನ್ನು ರಾಜ್ಯದ ವಿವಿಧ ಕಡೆ ಆಯೋಜಿಸಲಾಗಿದೆ. ಅಲ್ಲದೆ ಗೋವಾದಲ್ಲೂ ಮಾವು ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕಮಲಾಕ್ಷಿ ರಾಜಣ್ಣ ತಿಳಿಸಿದ್ದಾರೆ.
ಮಾವಿನ ಬೆಳೆ ಬೆಳೆಯುವ ರೈತರಿಗೆ ಹಾಗೂ ಮಾವು ಸಂಸ್ಕರಣಾ ಘಟಕ ನಡೆಸುವವರಿಗೆ ಸರಕಾರದಿಂದ ಶೇ 50ರಿಂದ 60 ಸಬ್ಸಿಡಿ ನೀಡಿ ಪೋತ್ಸಾಹಿಸಲಾಗುತ್ತಿದೆ ಎಂದು ಕಮಲಾಕ್ಷಿ ರಾಜಣ್ಣ ತಿಳಿಸಿದರು.ವಿದೇಶದಲ್ಲಿ ಭಾರತ ಮಾವಿನ ಹಣ್ಣಿನ ಮೇಲಿನ ನಿಷೇಧ ತೆರವು ರಫ್ತು ಪ್ರಮಾಣ ಹೆಚ್ಚಳ:-ಕಳೆದ ಎರಡು ವರ್ಷಗಳಲ್ಲಿ ಭಾರತದ ಮಾವಿನ ಹಣ್ಣು ವಿದೇಶದಲ್ಲಿ ಮಾರಾಟವಾಗಲು ಇದ್ದ ನಿಷೇಧ ತೆರವು ಗೊಂಡಿದೆ.
ಕೀಟನಾಶಕ ಮುಕ್ತಗೊಂಡ ಹಣ್ಣುಗಳಿಗೆ ವಿದೇಶದಲ್ಲಿ ಬೇಡಿಕೆ ಇರುವುದರಿಂದ ಈ ಬಗ್ಗೆ ಕ್ರಮ ಕೈ ಗೊಂಡ ಹಿನ್ನೆಲೆಯಲ್ಲಿ ರಫ್ತು ಮೇಲಿನ ನಿರ್ಭಂದ ಸಡಿಲಿಸಲಾಗಿದೆ. ಇದರಿಂದಾಗಿ ಭಾರತ ದಿಂದ ಮಾವಿನ ಹಣ್ಣು ರಫ್ತಾಗುವ ಪ್ರಮಾಣ ಹೆಚ್ಚಾಗಿದೆ.ಕರ್ನಾಟಕದಿಂದ 15 ಸಾವಿರ ಟನ್ ಮಾವಿನ ಹಣ್ಣು ವಿದೇಶಕ್ಕೆ ರಫ್ತಾಗುತ್ತದೆ. ಮುಖ್ಯವಾಗಿ ಲಂಡನ್, ಗಲ್ಫ್ ರಾಷ್ಟ್ರಗಳಿಗೆ (ಗ್ಯಾಮಾ ಇರಾಡಿಕೇಶನ್ ಹಾಗೂ ಇತರ ಸಂಸ್ಕರಣಾ ವಿಧಾನಗಳ ಮೂಲಕ )ಕೀಟನಾಶಕ ಮತ್ತು ಕ್ರಿಮಿನಾಶಕ ಮುಕ್ತವಾಗಿ ಮಾಡಲಾಗುತ್ತದೆ. ಇದಕ್ಕಾಗಿ ತಗಲುವ ವೆಚ್ಚವನ್ನು ಭರಿಸಲು ರೈತರಿಗೆ ಸಬ್ಸಿಡಿ ನೀಡಲಾಗುತ್ತದೆ.ಅಲ್ಫಾನ್ಸೋ ಮತ್ತು ನೀಲಂ ಮಾವುಗಳನ್ನು ಹೆಚ್ಚಾಗಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಕಮಲಾಕ್ಷಿ ರಾಜಣ್ಣ ತಿಳಿಸಿದರು.
ಸಮಾರಂಭದಲ್ಲಿ ಶಾಸಕ ರಾದ ಜೆ.ಆರ್.ಲೋಬೊ,ಮೊಹಿಯುದ್ದೀನ್ ಬಾವ ,ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ,ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಶ್ರೀವಿದ್ಯಾ, ಪಿಲಿಕುಳ ನಿಸರ್ಗ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎನ್.ವಿ.ಪ್ರಭಾಕರ ಶರ್ಮ,ಉತ್ಸವ ಸಮಿತಿಯ ಸದ್ಯಸ್ಯರಾದ ಚಂದ್ರಶೇಖರ ಚೌಟ,ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್,ವಿಜ್ಞಾನಿ ಡಾ.ಸೂರ್ಯಪ್ರಕಾಶ್ ಶೆಣೈ ,ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಯೋಗೇಶ್ ,ಕೃಷಿ ಇಲಾಖೆಯ ಜಂಟಿ ನಿದೇಶಕ ಕೆಂಪೇಗೌಡ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಹಣ್ಣುಗಳಿಂದ ರಚಿಸಿದ ಹಣ್ಣಿನ ಕೃತಕ ಮರದ ಬಳಿ ಹಣ್ಣು ಕೊಯ್ಯುವ ಮೂಲಕ ಅತಿಥಿಗಳು ಉತ್ಸವಕ್ಕೆ ಚಾಲನೆ ನೀಡಿದರು.ಬಳಿಕ ಎಲ್ಲರಿಗೂ ತಿನ್ನಲು ಮಾವಿನ ಹಣ್ಣು ನೀಡಲಾಯಿತು.ಮೇಳದಲ್ಲಿ ವಿವಿಧ ತಳಿಯ ಮಾವು ಹಲಸು ಹಾಗೂ ಇತರ ಹಣ್ಣುಗಳ ಪ್ರದರ್ಶನ ಮಾರಾಟ ಹಮ್ಮಿಕೊಳ್ಳಲಾಗಿತ್ತು.
ಪಿಲಿಕುಳ ನಿಸರ್ಗಧಾಮದಲ್ಲಿ ಹಮ್ಮಿಕೊಂಡ ಮಾವು ಮೇಳದಲ್ಲಿ ಸಂಘಟಕರು ಶನಿವಾರ ಹಮ್ಮಿಕೊಂಡ ಮಾವಿನ ಗೊರಟೆ ಎಸೆಯುವ ಸ್ಪರ್ಧೆಯಲ್ಲಿ ವಾರ್ತಾಭಾರತಿಯ ಛಾಯಾಗ್ರಾಹಕ ಮುಹಮ್ಮದ್ ಫಾರುಕ್ ಪ್ರಥಮ ಸ್ಥಾನ ಪಡೆದರು. ಪತ್ರಕರ್ತ ಸುರೇಂದ್ರ ವಾಗ್ಲೆ ದ್ವಿತೀಯ ಸ್ಥಾನಗಳಿಸಿದ್ದಾರೆ.







