ತುಂಬೆಯಲ್ಲಿ ನೀರಿನ ಮಟ್ಟ ಏರಿಕೆ: ರವಿವಾರ ನಗರಕ್ಕೆ ನೀರು ಸರಬರಾಜು

ಮಂಗಳೂರು, ಮೇ 21: ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆ ಕಂಡಿದ್ದು ರವಿವಾರ ನಗರಕ್ಕೆ ನೀರನ್ನು ಸರಬರಾಜು ಮಾಡಲಾಗುವುದು ಎಂದು ಮನಪಾ ಕಮಿಷನರ್ ಡಾ.ಎಚ್ ಗೋಪಾಲಕೃಷ್ಣ ತಿಳಿಸಿದ್ದಾರೆ.
ಮಳೆಯಿಂದ ತುಂಬೆ ಅಣೆಕಟ್ಟಿಗೆ ನದಿಯ ನೀರು ಹರಿದು ಬರುತ್ತಿದ್ದು 3 ಅಡಿ 7 ಇಂಚಿಗೆ ಇಳಿಕೆ ಕಂಡಿದ್ದ ನೀರಿನ ಮಟ್ಟ ಶನಿವಾರ ಮಧ್ಯಾಹ್ನ 4 ಅಡಿ 6 ಇಂಚಿಗೆ ಏರಿಕೆ ಕಂಡಿದೆ. ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಮನಪಾ ಮೇಯರ್ ಹರಿನಾಥ್, ನೀರಿನ ಸಮಸ್ಯೆ ಇನ್ನೊಂದು ವಾರದಲ್ಲಿ ಬಗೆಹರಿಯಲಿದೆ. ತುಂಬೆ ಅಣೆಕಟ್ಟಿನಲ್ಲಿ ನೀರು ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ನಿಗದಿತ ಒಂದು ದಿನ ಮುಂಚೆಯೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಒಮ್ಮೆ ನಗರಕ್ಕೆ ನೀರು ಸರಬರಾಜು ಮಾಡುವಾಗ 6 ಇಂಚು ಕಡಿಮೆಯಾಗುತ್ತದೆ. ರವಿವಾರ ನೀರು ಸರಬರಾಜು ಮಾಡಿದ ನಂತರ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು ನೋಡಿ ಪರಿಸ್ಥಿತಿಯನ್ನು ಅವಲೋಕಿಸಿ ನಗರಕ್ಕೆ ಮೂರು ದಿನಗಳಿಗೊಮ್ಮೆ ನೀರು ಕೊಡಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.





