ತನಿಖಾಧಿಕಾರಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ದರು ಅಸಾರಾಮ್ ಬಾಪೂ ಅನುಯಾಯಿಗಳು

ಅಹ್ಮದಾಬಾದ್: ಸಾಕ್ಷಿದಾರರೊಬ್ಬರ ಕೊಲೆ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂಜಿ ಬಾಪೂ ಹಾಗೂ ಆತನ ಮಗ ನಾರಾಯಣ ಸಾಯಿ ಅವರ ವಿರುದ್ಧ ಸಹಚರ ಕಾರ್ತಿಕ್ ಹಲ್ದಾರ್ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಗೆ ನೀಡಿದ್ದಾರೆ.
30 ಪುಟಗಳ ಹೇಳಿಕೆಯನ್ನು ಡಿಟೆಕ್ಷನ್ ಆಫ್ ಕ್ರೈಮ್ ಬ್ರ್ಯಾಂಚ್ ದಾಖಲಿಸಿಕೊಂಡಿದ್ದು, ಮೂವರು ಪ್ರಮುಖ ಸಾಕ್ಷಿಗಳನ್ನು ಹತ್ಯೆ ಮಾಡಿದ ಬಗ್ಗೆ ಹಾಗೂ ಇತರ ನಾಲ್ಕು ಮಂದಿಯನ್ನು ಕೊಲೆ ಮಾಡಲು ಯತ್ನಿಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಅಸಾರಾಂಜಿ ವಿರುದ್ಧದ ಪ್ರಕರಣದಲ್ಲಿ ಅವರ ವಿರುದ್ಧ ಸಾಕ್ಷಿ ನುಡಿಯುವವರನ್ನು ಹತ್ಯೆ ಮಾಡಲು 25 ಲಕ್ಷ ರೂಪಾಯಿಗಳನ್ನು ವಿವಿಧ ಸಾಧುಗಳಿಂದ ಸಂಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿರೋಧಿಗಳನ್ನು ಹತ್ಯೆ ಮಾಡಲು ಆರಂಭಿಸಿದ ಬಳಿಕ ಅಸಾರಾಂ ಸೇವಕರಿಂದ ಹಣ ಸಂಗ್ರಹಿಸಲಾಯಿತು. ಜಾರ್ಖಂಡ್‌ನ ದಾಮೋದರ ಸಿಂಗ್ ಎಂಬವರಿಗೆ 15 ಲಕ್ಷ ರೂಪಾಯಿಗಳನ್ನು ನೀಡಿ ಎಕೆ-47 ಖರೀದಿಸಲು ಸೂಚಿಸಲಾಯಿತು. ಆದರೆ ಎರಡು ವರ್ಷ ಬಳಿಕವೂ ಅವರಿಗೆ ಎಕೆ-47 ಸಿಗಲಿಲ್ಲ. ಎರಡು ಬ್ಯಾರಲ್ ಗನ್ ಹಾಗೂ 40 ಗುಂಡುಗಳನ್ನು ಒದಗಿಸಲಾಯಿತು. ಇದನ್ನು ಅಖಿಲ್ ಗುಪ್ತಾ ಹತ್ಯೆಗೆ ಬಳಸಲಾಯಿತು ಎಂದು ವಿವರಿಸಿದ್ದಾರೆ.
ಸಾಕ್ಷಿಗಳನ್ನು ಕೊಲ್ಲುವ ಜತೆಗೆ ಜೋಧಪುರ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸಿಪಿ ಚಂಚಲ್ ಮಿಶ್ರಾ ಅವರನ್ನು ಹತ್ಯೆ ಮಾಡಲು ಕೂಡಾ ಸಂಚು ರೂಪಿಸಲಾಗಿತ್ತು. ಬಾಪು ಅವರ ಜತೆ ಮಾತನಾಡುವ ವೇಳೆ ಚಂಚಲ್ ಅವರನ್ನು ಹತ್ಯೆ ಮಾಡಲು ನಿರ್ಧರಿಸಲಾಯಿತು ಎಂದು ಬಹಿರಂಗಪಡಿಸಿದ್ದಾರೆ.





