ಬರವಣಿಗೆಯ ಬಗ್ಗೆ ನಿರಾಸಕ್ತಿ ಸಲ್ಲದು: ಪ್ರೊ.ತ್ಯಾಗರಾಜ್
‘ಕನ್ನಡ ಲಿಪಿ ಉಗಮ ಮತ್ತು ವಿಕಾಸ’ ಕುರಿತ ವಿಚಾರ ಸಂಕಿರಣ
.jpg)
ಸಾಗರ, ಮೇ 21: ಬರವಣಿಗೆ ಶಕ್ತಿ ಅಪಾರವಾದದ್ದು. ಬರವಣಿಗೆ ಬಗ್ಗೆ ನಿರಾಸಕ್ತಿ ಸರಿಯಲ್ಲ. ನಮ್ಮ ಪ್ರಾಚೀನ ಲಿಪಿಕಾರರು ಬರೆದಿರುವ ಒಂದೊಂದು ಲಿಪಿಯಲ್ಲೂ ವಿಶೇಷವಾದ ಶಕ್ತಿ ಮತ್ತು ಅರ್ಥವಿದೆ ಎಂದು ಕುವೆಂಪು ವಿ.ವಿ. ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರೊ ಸಿ.ಎಂ.ತ್ಯಾಗರಾಜ್ ಹೇಳಿದರು.
ತಾಲೂಕಿನ ಕೆಳದಿ ವಸ್ತು ಸಂಗ್ರಹಾಲಯದ ಸಭಾಂಗಣದಲ್ಲಿ ಶನಿವಾರ ಕುವೆಂಪು ವಿಶ್ವವಿದ್ಯಾನಿಲಯ, ಕೆಳದಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ, ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ಲಿಪಿ ಉಗಮ ಮತ್ತು ವಿಕಾಸ’ ಕುರಿತ ವಿಚಾರ ಸಂಕಿರಣ ಕಾರ್ಯಾಗಾರವನ್ನು ಅವರು 1637ರ ಹಸ್ತಪ್ರತಿ ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಬರವಣಿಗೆಗೆ ಸಂಬಂಧಪಟ್ಟ ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿ ನಮ್ಮ ಲಿಪಿಕಾರರು ಒಂದೊಂದು ಅಕ್ಷರವನ್ನು ಕೆತ್ತಲು ಪಟ್ಟಿರುವ ಶ್ರಮ ಅವರ ಬರವಣಿಗೆಯ ಹಿಂದೆ ಕಾಣುತ್ತದೆ. ಹಿಂದಿನವರ ಸಾಹಿತ್ಯ, ವ್ಯವಹಾರ ಜ್ಞಾನ, ಭಾಷಾ, ಶ್ರೀಮಂತಿಕೆ, ನಮ್ಮ ಆಚಾರ ವಿಚಾರ, ಹಬ್ಬಹರಿದಿನ ಎಲ್ಲವನ್ನೂ ನಾವು ಪ್ರಾಚೀನ ಲಿಪಿಯಲ್ಲಿ ಕಾಣುತ್ತೇವೆ ಎಂದು ತಿಳಿಸಿದರು.
ನಮ್ಮ ಭಾಷೆಗೆ ಜೀವಂತಿಕೆಯನ್ನು ಇಂತಹ ಲಿಪಿ ಸಂಗ್ರಹ ತಂದು ಕೊಡುತ್ತದೆ. ಕನ್ನಡ ಲಿಪಿ ಉಗಮವಾದ ಇತಿಹಾಸವನ್ನು ನಾವು ಮೋಡಿ ಲಿಪಿ, ತಾಳೆಗರಿಗಳಿಂದ ತಿಳಿದು ಕೊಳ್ಳಬಹುದು. ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಹಿರಿಯರು ದಾಖಲಿಸಿಟ್ಟಿರುವ ಲಿಪಿ ಸಂಗ್ರಹವನ್ನು ನಾವು ಓದಿ ಅರ್ಥ ಮಾಡಿಕೊಳ್ಳುವಂತೆ ಆಗಬೇಕು. ಅಂತಹ ಗ್ರಂಥಗಳಲ್ಲಿ ಜೀವನ ವಿಕಾಸದ ಜೊತೆಗೆ ಭಾಷೆಯ ವಿಕಾಸ ಕುರಿತಮಾಹಿತಿಗಳೂ ಸಿಗುತ್ತವೆ ಎಂದರು.
ಬದಲಾದ ದಿನಮಾನಗಳಲ್ಲಿ ಬರೆಯುವುದು ಕಡಿಮೆಯಾಗುತ್ತಿದೆ. ಮೊಬೈಲ್, ಕಂಪ್ಯೂಟರ್‌ಗಳಂತಹ ಯಂತ್ರಗಳು ನಮ್ಮ ಜೀವಂತಿಕೆಯ ಸಾಧನವಾಗಿ ಮಾರ್ಪಟ್ಟಿರುವುದು ದುರದೃಷ್ಟಕರ. ಇಂಗ್ಲಿಷ್ ಭಾಷೆಗೆ 600-700 ವರ್ಷಗಳ ಇತಿಹಾಸವಿದ್ದು, ಅದು ಜಗತ್ತಿನ ಭಾಷೆಯಾಗಿ ಮಾರ್ಪಟ್ಟಿದೆ. ಆದರೆ 2 ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಬಗ್ಗೆ ಮಾತ್ರ ನಮ್ಮಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಪ್ರತಿಯೊಬ್ಬರು ಓದುವ ಜೊತೆಗೆ ಬರೆಯುವುದರಲ್ಲಿ ನಿರಂತರತೆ ಕಾಪಾಡಿಕೊಳ್ಳಬೇಕು. ಇದರಿಂದ ಕನ್ನಡ ಭಾಷೆ ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ನಟರಾಜ ಭಾಗವತ್ ಮಾತನಾಡಿ, ಮೋಡಿ ಲಿಪಿಯು 1650 ರಿಂದ 1950ರವರೆಗೆ ಚಾಲ್ತಿಯಲ್ಲಿತ್ತು. ನಮ್ಮ ಜನಜೀವನದ ಆಗುಹೋಗುಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟುಕೊಂಡಿರುವ ಮೋಡಿಲಿಪಿಯನ್ನು ಓದಿ, ಅರ್ಥೈಸಿಕೊಳ್ಳುವ ಸಂಸ್ಕೃತಿ ಬೆಳೆಸಬೇಕು. ನಮ್ಮ ಹಿಂದಿನ ಆಸ್ತಿ ವಿಲೇವಾರಿ ಪತ್ರ, ನ್ಯಾಯಾಲಯ ದಾಖಲೆಗಳು, ಕಂದಾಯ ಇಲಾಖೆ ಕಡತಗಳು ಮೋಡಿ ಲಿಪಿಯಲ್ಲಿದ್ದು ಅದನ್ನು ಓದುವವರು ಸಿಗುವುದು ವಿರಳ. ಕೆಳದಿ ವಸ್ತು ಸಂಗ್ರಹಾಲಯ ಮೋಡಿ ಲಿಪಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು. ವೇದಿಕೆಯಲ್ಲಿ ರಾಜ್ಯ ಪತ್ರಕಾರ ಇಲಾಖೆಯ ಸದಾನಂದ ಉಪಸ್ಥಿತರಿದ್ದರು.







