25ರಂದು ಪಿಣರಾಯಿ ಪ್ರತಿಜ್ಞೆ

ತಿರುವನಂತಪುರ, ಮೇ 21: ಕೇರಳದ 22ನೆ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಮೇ 25ರಂದು ತಿರುವನಂತಪುರದಲ್ಲಿ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ.
ರಾಜ್ಯದ 140 ಸದಸ್ಯ ಬಲದ ವಿಧಾನಸಭೆಯಲ್ಲಿ 91 ಸ್ಥಾನಗಳನ್ನು ಗೆದ್ದಿರುವ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) 5 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿದೆ.
ಪಕ್ಷದ ಹಿರಿಯ ನಾಯಕ ವಿ.ಎಸ್. ಅಚ್ಯುತಾನಂದನ್ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ರೊಂದಿಗೆ ಶನಿವಾರ ನಡೆಸಿದ ಸಭೆಯಲ್ಲಿ ಅಧಿಕಾರ ಗ್ರಹಣದ ದಿನಾಂಕವನ್ನು ವಿಜಯನ್ ಖಚಿತಪಡಿಸಿದ್ದಾರೆ.
ಅಚ್ಯುತಾನಂದನ್ ಈ ಹಿಂದೆ ತಮ್ಮ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ ಅವರ ಭೇಟಿಗೆ ಬಂದಿದ್ದೇನೆ. ಈಗಿನ ಪರಿಸ್ಥಿತಿಯಂತೆ, ಹೊಸ ಸರಕಾರದ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಮೇ 25ರಂದು ಇಲ್ಲಿನ ಕೇಂದ್ರ ಕ್ರೀಡಾಂಗಣದಲ್ಲಿ ನಡೆಸಲು ತಾವು ನಿರ್ಧರಿಸಿದ್ದೇವೆಂದು ಅವರು ಹೇಳಿದ್ದಾರೆ. ತಮ್ಮ ಪಕ್ಷದಿಂದ ಸಚಿವರನ್ನು ಅಂತಿಮಗೊಳಿಸುವ ಬಗ್ಗೆ ಚರ್ಚೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಿ ಸಿದ್ಧವಾಗಲಿದೆಯೆಂದು ವಿಜಯನ್ ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಭೆಯೊಂದರಲ್ಲಿ ವಿಜಯನ್‌ರನ್ನು ಎಲ್‌ಡಿಎಫ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಾಗಿದೆ.







