ವಿಶ್ವದ ಸವಾಲುಗಳನ್ನು ಎದುರಿಸಲು ಬುದ್ಧನ ಬೋಧನೆ ಸಹಕಾರಿ: ಬಾನ್ ಕೀ ಮೂನ್
ವಿಶ್ವಸಂಸ್ಥೆ,ಮೇ 21: ಸಮುದಾಯಗಳನ್ನು ವಿಭಜಿಸುವ ಹಾಗೂ ಹಿಂಸಾತ್ಮಕ ಸಂಘರ್ಷಗಳನ್ನು ಪ್ರಚೋದಿಸುವ ದ್ವೇಷಪೂರಿತ ಭಾಷಣಗಳು ವಿಜೃಂಭಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ಅನುಕಂಪ ಹಾಗೂ ಅಹಿಂಸೆಯ ಕುರಿತಾದ ಬೌದ್ಧ ಧರ್ಮದ ಬೋಧನೆಗಳು ಅಂತಾರಾಷ್ಟ್ರೀಯ ಸಮುದಾಯಕ್ಕೆ ಗಂಭೀರ ಸವಾಲುಗಳನ್ನು ಎದುರಿಸಲು ನೆರವಾಗಬಲ್ಲದು ಎಂದು ವಿಶ್ವಸಂಸ್ಥೆಯ ವರಿಷ್ಠ ಬಾನ್ ಕಿ ಮೂನ್ ತಿಳಿಸಿದ್ದಾರೆ.
ಬುದ್ಧಪೂರ್ಣಿಮೆಯ ಅಂಗವಾಗಿ ಅವರು ಶುಕ್ರವಾರ ನೀಡಿದ ಸಂದೇಶವೊಂದರಲ್ಲಿ ಭಗವಾನ್ ಬುದ್ಧನ ಬೋಧನೆಗಳು, ‘ಜ್ಞಾನದ ಮಹಾನ್ ಭಂಡಾರವಾಗಿದೆ’ ಎಂದರು. ತನ್ನ ತಾಯಿಯು ಶ್ರದ್ಧಾವಂತ ಬೌದ್ಧ ಧರ್ಮಾನುಯಾಗಿದ್ದರಿಂದ ಅವುಗಳನ್ನು ಕುಟುಂಬದ ಮೂಲಕವೇ ಕಲಿಯಲು ತನಗೆ ಸಾಧ್ಯವಾಯಿತೆಂದು ಅವರು ಹೇಳಿದ್ದಾರೆ.
‘‘ಸಾಮೂಹಿಕ ಚಳವಳಿಗಳು, ಹಿಂಸಾತ್ಮಕ ಸಂಘರ್ಷಗಳು,ದೌರ್ಜನ್ಯಗಳು, ಮಾನವಹಕ್ಕುಗಳ ಉಲ್ಲಂಘನೆ ಹಾಗೂ ಸಮುದಾಯಗಳನ್ನು ವಿಭಜಿಸುವ ದ್ವೇಷಪೂರಿತ ಮಾತುಗಾರಿಕೆಗಳ ಈ ಸಮಯದಲ್ಲಿ, ಬುದ್ಧಪೂರ್ಣಿಮೆಯು ವಿಶ್ವಸಮುದಾಯಕ್ಕೆ ಸವಾಲನ್ನು ಎದುರಿಸಲು ಅಮೂಲ್ಯ ಅವಕಾಶವೊಂದನ್ನು ತಂದುಕೊಟ್ಟಿದೆ’’ಎಂದು ಬಾನ್ ತಿಳಿಸಿದರು. ಬುದ್ಧಪೂರ್ಣಿಮೆಯ ಮುನ್ನಾ ದಿನವಾದ ಶುಕ್ರವಾರ ವಿಶ್ವಸಂಸ್ಥೆಯ ಮಹಾಸಭೆಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಹಾಗೂ ಇತರ 13 ದೇಶಗಳ ಬೌದ್ಧಧರ್ಮಗುರುಗಳು ಹಾಗೂ ರಾಜತಾಂತ್ರಿಕರು ಪಾಲ್ಗೊಂಡಿದ್ದರು.
ಎಲ್ಲಾ ಜನರು ಪರಸ್ಪರ ನಂಟನ್ನು ಹೊಂದಿದ್ದಾರೆಂದು ಬೌದ್ಧ ಧರ್ಮ ಬೋಧಿಸುತ್ತದೆ.ಬಡತನ, ನಿರ್ವಸತೀಕರಣ, ವಿಕೋಪಗಳು,ರೋಗರುಜಿನಗಳು, ಸಂಘರ್ಷ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಎಲ್ಲಾ ಸರಹದ್ದುಗಳನ್ನು ಮೀರಿದ ಮತ್ತಿತರ ಜಾಗತಿಕ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸಬೇಕಾಗಿದೆಯೆಂದು ಮೂನ್ ಕರೆ ನೀಡಿದರು.
ಬುದ್ಧಪೂರ್ಣಿಮೆಯ ಈ ಸುಸಂದರ್ಭವನ್ನು ಅಂತಾರಾಷ್ಟ್ರೀಯ ಸಮುದಾಯವು ಸಮಾನವಾದ ಭವಿಷ್ಯದ ಹಿತದೃಷ್ಟಿಯಿಂದ ಭಿನ್ನಾಭಿಪ್ರಾಯಗಳ ನಿವಾರಣೆ,ಸಹಬಾಳ್ವೆಯ ಪ್ರಜ್ಞೆ ಬೆಳೆಸಲು ಹಾಗೂ ಜೀವದಯೆಯನ್ನು ಪ್ರದರ್ಶಿಸಲು ಬಳಸಿಕೊಳ್ಳಬೇಕೆಂದು ಮೂನ್ ಕರೆ ನೀಡಿದರು.







