ಎಚ್.ಕೆ.ಪಾಟೀಲ್, ಚಿಂಚನಸೂರ್ ರಾಜೀನಾಮೆಗೆ ಶೆಟ್ಟರ್ ಆಗ್ರಹ
ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ

ಬೆಂಗಳೂರು, ಮೇ 21: ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಗೆ ಪೀಠೋಪಕರಣ ಖರೀದಿಯಲ್ಲಿ ನಿಯಮ ಉಲ್ಲಂಘಿಸಿದ್ದು, ಸುಮಾರು 17.50 ಕೋಟಿ ರೂ.ಅಧಿಕ ಮೊತ್ತದ ಅವ್ಯವಹಾರದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಶನಿವಾರ ವಿಧಾನಸೌಧದ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಂಟ್ರಲ್ ಸಪ್ಲೈಸ್ ಸರ್ವಿಸಸ್ ಹೆಸರಿನಲ್ಲಿ ಗೋವಿಂದ ರೆಡ್ಡಿ ಮತ್ತು ಆರ್.ಜೆ.ಕಾಮನ್‌ಗೌಡರ್ ಎಂಬ ತಮ್ಮ ಸಂಬಂಧಿಗಳಿಗೆ ಪೀಠೋಪಕರಣ ಪೂರೈಕೆಗೆ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿ ಟೆಂಡರ್ ನೀಡಲಾಗಿದೆ. ಈ ಪ್ರಕರಣದಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ ಎಂದು ದೂರಿದರು.
ದುಪ್ಪಟ್ಟು ಬೆಲೆ: ಪೀಠೋಪಕರಣಗಳನ್ನು ಈಗಾಗಲೇ ಪೂರೈಕೆ ಮಾಡಿದ್ದು, ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ದೊರೆಯುವ ಕುರ್ಚಿ, ಮೇಜುಗಳನ್ನು ದುಪ್ಪಟ್ಟು ಬೆಲೆ ನೀಡಿ ಖರೀದಿಸುವ ಮೂಲಕ ಸರಕಾರಕ್ಕೆ ಕೋಟ್ಯಂತರ ರೂ.ನಷ್ಟವನ್ನುಂಟು ಮಾಡಲಾಗಿದೆ ಎಂದು ಜಗದೀಶ್ ಶೆಟ್ಟರ್ ದಾಖಲೆಗಳನ್ನು ಬಹಿರಂಗಪಡಿಸಿದರು.
ಪೀಠೋಪಕರಣ ಖರೀದಿಗೆ ದರ ನಿಗದಿ ಸಂಬಂಧ ರಚಿಸಿದ್ದ ಸಮಿತಿ ಅನುಮೋದನೆ ನೀಡಿದ್ದ ದರವನ್ನು ಅನುರ್ಜಿತಗೊಳಿಸಿದ್ದು, ಹೊಸದಾಗಿ ದರ ನಿಗದಿಪಡಿಸಲಾಗಿದೆ ಎಂದು ದೂರಿದ ಅವರು, ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ಕಂಪ್ಯೂಟರ್ ಖರೀದಿಯಲ್ಲೂ ಅವ್ಯವಹಾರ ನಡೆದಿದ್ದು, ಶೀಘ್ರದಲ್ಲೆ ದಾಖಲೆ ಬಹಿರಂಗಪಡಿಸುವೆ ಎಂದು ಎಚ್ಚರಿಸಿದರು.
ದಲಿತ ನೌಕರ ಬಲಿ: ಕುಡಿಯುವ ನೀರಿನ ಯೋಜನೆಗಳಿಗೆ ಮೀಸಲಿಟ್ಟದ್ದ 600 ಕೋಟಿ ರೂ.ಗಳಷ್ಟು ಹಣವನ್ನು ಅನಧಿಕೃತವಾಗಿ ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಪ್ರಕರಣದಲ್ಲಿ ಮಾಹಿತಿ ನೀಡದ ಕಾರಣಕ್ಕೆ ದಲಿತ ನೌಕರ ರಾಯಗೇರಿ ಎಂಬವರನ್ನು ಬಲಿಪಶು ಮಾಡಲಾಗಿದೆ.
ಆದರೆ, ಸರಕಾರದ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಕೋಟ್ಯಂತರ ರೂ. ಬಡ್ಡಿ ಮೊತ್ತವನ್ನು ನುಂಗಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ‘ಅಹಿಂದ’ ಏಳ್ಗೆಗಾಗಿ ದುಡಿಯುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ದಲಿತರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಸ್ತ್ರದ ಹಣವೂ ದುರ್ಬಳಕೆ: ಜವಳಿ ಇಲಾಖೆಯ ವ್ಯಾಪ್ತಿಯಲ್ಲಿನ ಜವಳಿ ಮತ್ತು ಕೈಮಗ್ಗ ನಿಗಮದಿಂದ 2008-13ರ ‘ಸುವರ್ಣ ವಸ್ತ್ರನೀತಿ’ ಅನುಷ್ಠಾನ ಸಂಬಂಧ ಖಾಸಗಿ ಸಂಸ್ಥೆಯೊಂದಿಗಿನ ಒಡಂಬಡಿಕೆ ಮಾನದಂಡ ಪರಿಶೀಲಿಸದೆ 6.17ಕೋಟಿ ರೂ.ಹಣ ಪಾವತಿಸಿ ಸರಕಾರಕ್ಕೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಶೆಟ್ಟರ್ ಗಂಭೀರ ಆರೋಪ ಮಾಡಿದರು.
ಈ ಅವ್ಯವಹಾರದಲ್ಲಿ ಸಚಿವ ಬಾಬುರಾವ್ ಚಿಂಚನಸೂರ್ ಭಾಗಿಯಾಗಿದ್ದು, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳಾದ ವಿಜಯ ಕುಮಾರ್, ಶ್ರೀನಿವಾಸಮೂರ್ತಿ, ಸುರೇಶ್ ಕುಮಾರ್, ಗಂಗಯ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಮಾಜಿ ಸಚಿವ ಗೋವಿಂದ ಎಂ.ಕಾರಜೋಳ, ಶಾಸಕ ಡಾ.ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.
ಆರೋಪಿಗಳ ಪರ ಶೆಟ್ಟರ್ ವಕಾಲತ್ತು:
ಎಚ್.ಕೆ.ಪಾಟೀಲ್ ಬೆಂಗಳೂರು, ಮೇ 21: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸಂಬಂಧಿಸಿದ 495 ಕೋಟಿ ರೂ.ಗಳನ್ನು ನಕಲಿ ಖಾತೆಗಳಲ್ಲಿ ಇಟ್ಟಿದ್ದ ಆರೋಪಿಗಳಿಗೆ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ವಕೀಲರಾಗುವುದಾದರೆ ತಮ್ಮ ಅಭ್ಯಂತರವಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ನಕಲಿ ಖಾತೆಗಳಲ್ಲಿ ಇರಿಸಿದ್ದ ಈ ಹಣವನ್ನು ನಮ್ಮ ಸರಕಾರ ಪತ್ತೆ ಮಾಡಿ ಹೊರಗೆ ತಂದಿದೆ. ಅಲ್ಲದೆ, ಆರೋಪಿಗಳ ವಿರುದ್ಧ ಕಾನೂನು ಹಾಗೂ ಆಡಳಿತಾತ್ಮಕವಾಗಿ ಕ್ರಮ ಕೈಗೊಂಡಿದೆ ಎಂದರು.
ಸರಕಾರದ ಹಣವನ್ನು ನಕಲಿ ಖಾತೆಗಳಲ್ಲಿ ಇರಿಸಿದ್ದ ಆರೋಪಿಗಳ ವಿರುದ್ಧ ಜಗದೀಶ್ ಶೆಟ್ಟರ್ ವಕಾಲತ್ತು ವಹಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರು ವಂತಹ ವಿರೋಧ ಪಕ್ಷದ ನಾಯಕರು ಜನಸಾಮಾನ್ಯರ ಪರವೋ ಅಥವಾ ಇಂತಹ ಆರೋಪಿಗಳ ಪರವೋ ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಅವರು ಸವಾಲು ಹಾಕಿದರು.







