ಬಂದೂಕು ಮುಕ್ತ ವಲಯಗಳ ರದ್ದು: ಟ್ರಂಪ್ ಭರವಸೆ
ಲೂಯಿಸ್‌ವಿಲ್, (ಕೆಂಟಕಿ), ಮೇ 21: ಶಿಕ್ಷಣಸಂಸ್ಥೆಗಳಲ್ಲಿ ಹಾಗೂ ಸೇನಾನೆಲೆಗಳಲ್ಲಿ ಬಂಧೂಕುಗಳನ್ನು ಕೊಂಡೊಯ್ಯಲು ಅವಕಾಶ ನೀಡುವುದಾಗಿ ನಿರಂತರವಾಗಿ ಭರವಸೆ ನೀಡುತ್ತಾ ಬಂದಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದೇಶದ ಬಂಧೂಕು ಮುಕ್ತ ವಲಯಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದಾರೆ.
ಅಮೆರಿಕದ ನಾಗರಿಕರು ಬಂದೂಕುಗಳ ಒಡೆತನವನ್ನು ಹೊಂದುವುದರ ವಿರುದ್ಧ ನಿರ್ಬಂಧಗಳನ್ನು ವಿಧಿಸುವುದನ್ನು ಬೆಂಬಲಿಸುವ ಮೂಲಕ ಹಿಲರಿ ಕ್ಲಿಂಟನ್ ಹೃದಯಹೀನತೆಯನ್ನು ಪ್ರದರ್ಶಿಸಿದ್ದಾರೆಂದು ಟ್ರಂಪ್ ಕಟಕಿಯಾಡಿದ್ದಾರೆ. ಬಂದೂಕುಗಳನ್ನು ಹೊಂದುವುದಕ್ಕೆ ನಿರ್ಬಂಧ ವಿಧಿಸುವ ಮೂಲಕ ಅತ್ಯಧಿಕ ಅಪರಾಧಗಳು ನಡೆಯುವ ಪ್ರದೇಶಗಳಲ್ಲಿ ಅಮೆರಿಕನ್ನರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಅಸಾಧ್ಯವಾಗಲಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಂಟಕಿ ಸಂಸ್ಥಾನದ ಲೂಯಿಸ್‌ವಿಲೆನಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್‌ನ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಲಿಂಟನ್ ನಿಲುವಿನಿಂದಾಗಿ ಬಂದೂಕು ಮುಕ್ತ ವಲಯ ಕಾಯ್ದೆಗೆ ಮಾಡಲಾದ ಎರಡನೆ ತಿದ್ದುಪಡಿಯು ಹಿಂದೆಂದಿಗಿಂತಲೂ ಹೆಚ್ಚು ಅಪಾಯದಲ್ಲಿದೆಯೆಂದರು. ಹಿಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾದಲ್ಲಿ ಬಂದೂಕು ಮುಕ್ತ ವಲಯ ಕಾಯ್ದೆಗೆ ಮಾಡಲಾದ ಎರಡನೆ ತಿದ್ದುಪಡಿಯನ್ನು ರದ್ದುಪಡಿಸಲಾಗುವುದೆಂಬ ಎನ್‌ಆರ್‌ಎ ನಾಯಕತ್ವದ ಆತಂಕಕ್ಕೆ ಅವರು ಧ್ವನಿಗೂಡಿಸಿದರು. ಆದರೆ ನಾನು ನಿಮ್ಮನ್ನು ಯಾವತ್ತೂ ಕೈಬಿಡಲಾರೆನೆಂದ ಟ್ರಂಪ್, ಬಂದೂಕುಗಳ ಒಡೆತನ ಹೊಂದಿರುವ ಸುಮಾರು 80 ಸಾವಿರ ಎನ್‌ಆರ್‌ಎ ಸದಸ್ಯರಿಗೆ ಭರವಸೆ ನೀಡಿದರು.
‘‘ನಾನು ಈ ಮೊದಲು ಹೇಳಿದ ಹಾಗೆ ಹಿಲರಿ ಕ್ಲಿಂಟನ್ ನಿಮ್ಮ ಬಂದೂಕುಗಳನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ. ಬಂದೂಕು ಮುಕ್ತ ವಲಯ ಕಾಯ್ದೆಗೆ ಮಾಡಲಾದ ಎರಡನೆ ತಿದ್ದುಪಡಿಯನ್ನು ರದ್ದುಪಡಿಸಲು ಆಕೆ ಇಚ್ಛಿಸಿದ್ದಾರೆ’’ ಎಂದು ಟ್ರಂಪ್ ಆಪಾದಿಸಿದರು.
ಬಂದೂಕು ಮುಕ್ತ ವಲಯ ಕಾಯ್ದೆಗೆ ಮಾಡಲಾದ ಎರಡನೆ ತಿದ್ದುಪಡಿಯಿಂದಾಗಿ ಕ್ರೀಡಾಪಟುಗಳು ಹಾಗೂ ಬೇಟೆಗಾರರಲ್ಲದೆ ಇತರರಿಗೂ ಬಂದೂಕುಗಳನ್ನು ಹೊಂದಲು ಅಸಾಧ್ಯವಾಗಲಿದ್ದು, ಇದನ್ನು ಅಮೆರಿಕದ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ ತೀವ್ರವಾಗಿ ವಿರೋಧಿಸುತ್ತಿದೆ.
ಕಾನೂನನ್ನು ಅನುಸರಿಸುವ ನಾಗರಿಕರಿಗೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಶೇ.100ರಷ್ಟು ಹಕ್ಕಿದೆ ಎಂದು ನಾನು ನಿಮಗೆ ಖಾತರಿ ನೀಡುತ್ತಿದ್ದೇನೆ’’ ಎಂದು ಟ್ರಂಪ್ ಸಭಿಕರ ಕರತಾಡನದ ನಡುವೆ ಘೋಷಿಸಿದ್ದಾರೆ.
ಇದಕ್ಕೂ ಮೊದಲು, ಅಮೆರಿಕದ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿತ್ತು. ಬಂದೂಕು ನಿಷೇಧ ವಲಯ ಕಾಯ್ದೆಗೆ ಮಾಡಲಾದ ಎರಡನೆ ತಿದ್ದುಪಡಿಯನ್ನು ಸಮರ್ಥಿಸುವ ಏಕೈಕ ಅಧ್ಯಕ್ಷೀಯ ಆಕಾಂಕ್ಷಿ ಅಭ್ಯರ್ಥಿ ಅವರಾಗಿದ್ದಾರೆಂದು ಅದು ಶ್ಲಾಘಿಸಿತ್ತು.
ಅಮೆರಿಕ ರೈಫಸ್ ಅಸೋಸಿಯೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾಪಿಯರೆ ಕೂಡಾ ಬಂಧೂಕು ನಿಷೇಧಿತ ವಲಯಗಳನ್ನು ಟೀಕಿಸಿದ್ದಾರೆ. ಕೆಟ್ಟ ವ್ಯಕ್ತಿಯನ್ನು ತಡೆಯುವ ಏಕೈಕ ದಾರಿಯೆಂದರೆ, ಒಳ್ಳೆಯ ವ್ಯಕ್ತಿಗೆ ಬಂದೂಕನ್ನು ನೀಡುವುದಾಗಿದೆ’’ ಎಂದವರು ಹೇಳಿದ್ದಾರೆ. ಬಂದೂಕುಗಳನ್ನು ಹೊಂದಲು ಅವಕಾಶವಿರುವ ಪ್ರದೇಶಗಳಲ್ಲಿ ಕೆಲವೇ ಕೆಲವು ಹಿಂಸಾತ್ಮಕ ಘಟನೆಗಳು ಸಂಭವಿಸಿವೆ ಹಾಗೂ ಬಂದೂಕುಗಳನ್ನು ಹೊಂದಲು ಅನುಮತಿಯಿಲ್ಲದ ಪ್ರದೇಶಗಳ ಮೇಲೆಯೇ ಉಗ್ರರು ಗುರಿಯಿಡುತ್ತಿದ್ದಾರೆಎಂದರು.
ಹಿಲರಿ ಕ್ಲಿಂಟನ್ ನಿಮ್ಮ ಬಂದೂಕು ಗಳನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ. ಬಂದೂಕು ಮುಕ್ತ ವಲಯ ಕಾಯ್ದೆಗೆ ಮಾಡಲಾದ ಎರಡನೆ ತಿದ್ದುಪಡಿಯನ್ನು ರದ್ದುಪಡಿಸಲು ಆಕೆ ಇಚ್ಛ್ಚಿಸಿದ್ದಾರೆ’’. -ಟ್ರಂಪ್







