ದಲಿತ ನಾಯಕರು ಒಣಪ್ರತಿಷ್ಠೆ ತೊರೆಯಲಿ: ಸತೀಶ್ ಜಾರಕಿಹೊಳಿ
ಬುದ್ಧ ಬೆಳದಿಂಗಳು-2016 ಸಾಂಸ್ಕೃತಿಕೋತ್ಸವ

ಬೆಂಗಳೂರು, ಮೇ 21: ಅಂಬೇಡ್ಕರ್‌ರವರ ವಿಮೋಚನಾ ರಥವನ್ನು ಶೋಷಣೆಯಿಂದ ಮುಕ್ತಿಯೆಡೆಗೆ ಚಲಿಸುವಂತೆ ಮಾಡಲು ದಲಿತ ಸಂಘಟನೆಗಳ ನಾಯಕರು ಒಂದಾಗ ಬೇಕು ಎಂದು ಸಣ್ಣ ಕೈಗಾರಿಕೆಗಳ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.
ಶನಿವಾರ ಕರ್ನಾಟಕ ಬೌದ್ಧ ಸಮಾಜ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಡಾ.ಅಂಬೇಡ್ಕರ್‌ರವರ 125ನೆ ಜನ್ಮದಿನೋತ್ಸವ ಹಾಗೂ 2560ನೆ ಬುದ್ಧ ಪೂರ್ಣಿಮೆಯ ಅಂಗವಾಗಿ ‘ಬುದ್ಧ ಬೆಳದಿಂಗಳು-2016’ ಸಾಂಸ್ಕೃತಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್‌ರವರ ವಿಮೋಚನಾ ರಥವನ್ನು ಶೋಷಣೆಯಿಂದ ಮುಕ್ತಿಯೆಡೆಗೆ, ಸ್ವಾಭಿಮಾನದೆಡೆಗೆ ಸಾಗಿಸಬೇಕಾದ ಜವಾಬ್ದಾರಿ ದಲಿತ ಸಮುದಾಯದ ಮೇಲಿದೆ. ಆದರೆ, ದಲಿತ ನಾಯಕರು ತಮ್ಮ ಒಣ ಪ್ರತಿಷ್ಠೆಗಳಿಂದಾಗಿ ಗುಂಪು, ಗುಂಪುಗಳಾಗಿ ಒಡೆದು ಹೋಗಿದ್ದಾರೆ. ಈ ನಾಯಕರು ಒಂದು ವೇದಿಕೆಗೆ ಬಂದರೆ ಮಾತ್ರ ದಲಿತರ ವಿಮೋಚನೆ ಸಾಧ್ಯವೆಂದು ಅವರು ಅಭಿಪ್ರಾಯಿಸಿದರು.
ಭಾರತದಲ್ಲಿ ಹುಟ್ಟಿದ ಬುದ್ಧ ಹಾಗೂ ಅವರ ಅನುಯಾಯಿಗಳನ್ನು ಮನುವಾದಿಗಳು ದೇಶದಿಂದ ಹೊರದೂಡಿದರು. ಇದರಿಂದ ಚೀನಾ, ಶ್ರೀಲಂಕಾ, ಜಪಾನ್, ಬರ್ಮಾ, ನೇಪಾಳದಲ್ಲಿ ಬುದ್ಧನ ವಿಚಾರಗಳು ಆಳವಾಗಿ ಬೇರು ಬಿಟ್ಟು, ಆ ದೇಶದ ಪ್ರಗತಿಗೆ ಕಾರಣವಾಯ್ತು. ಹೀಗಾಗಿ ಪುನಃ ಭಾರತದಲ್ಲಿ ಬುದ್ಧನ ವಿಚಾರಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವಂತಹ ಜವಾಬ್ದಾರಿ ದಲಿತ, ಹಿಂದುಳಿದ ಸಮುದಾಯಗಳ ಮೇಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್‌ರವರ ಚಿಂತನೆಯನ್ನು ಇಡೀ ವಿಶ್ವವೆ ಗೌರವಿಸುತ್ತಿದೆ. ಆದರೆ, ಭಾರತದ ಜಾತಿ ಮನಸುಗಳು ಮಾತ್ರ ಅಂಬೇಡ್ಕರ್‌ರವರನ್ನು ಕೇವಲ ಚೌಕಟ್ಟಿಗೆ ಸೀಮಿತಗೊಳಿಸಿವೆ. ಇಂತಹ ಮನುವಾದಿ ಚಿಂತನೆಯನ್ನು ನಿರ್ಮೂಲನೆ ಮಾಡಲು ದೇಶದ ಬಹುಜನರು ಒಂದಾಗಬೇಕು ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದರು.
ದೇಶದ ವಿಮೋಚನೆಗೆ ದಾರಿದೀಪವಾಗಿರುವ ಬುದ್ಧ, ಬಸವ ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು, ಸಾವಿತ್ರಿ ಬಾಫುಲೆ ಮುಂತಾದ ಮಹನೀಯರ ಆದರ್ಶಗಳನ್ನು ಪಾಲಿಸಬೇಕು. ಇದರಿಂದ ಭಾರತ ಸರ್ವಜನರ ಶಾಂತಿಯ ತೋಟವಾಗುತ್ತದೆ ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿರುವ ಯಾವ ದಲಿತ ಸಂಘಟನೆಯ ಯಾವ ನಾಯಕರಿಗೂ ಅಂಬೇಡ್ಕರ್‌ರವರ ವಿಮೋಚನಾ ರಥವನ್ನು ಸಾಗಿಸಲು ಇರಬೇಕಾದ ಶುದ್ಧ ಹಸ್ತವಿಲ್ಲ. ಹೀಗಾಗಿ ಯುವ ಜನತೆ ಅಂಬೇಡ್ಕರ್‌ರವರ ರಥವನ್ನು ಸಾಗಿಸಲು ಇರಬೇಕಾದ ಅರ್ಹತೆ ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ದೇಶದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತವನ್ನು ಮನುವಾದಿ ಸಂವಿಧಾನದ ಅಡಿಯಲ್ಲಿ ರಚಿಸಿಕೊಂಡಿವೆ. ಇಂತಹ ಪಕ್ಷಗಳಿಂದ ದೇಶದಲ್ಲಿ ಸಮಾನತೆ, ಸಹೋದರತೆ, ಭ್ರಾತೃತ್ವವನ್ನು ತರಲು ಸಾಧ್ಯವಿಲ್ಲ. ಹೀಗಾಗಿ ಅಂಬೇಡ್ಕರ್‌ರವರ ಸಂವಿಧಾನವನ್ನು ಪ್ರಾಮಾಣಿಕವಾಗಿ ಜಾರಿ ಮಾಡುವಂತಹ ರಾಜಕೀಯ ಪಕ್ಷದ ಆವಶ್ಯಕತೆ ನಮಗಿದೆ ಎಂದು ಅವರು ಅಭಿಪ್ರಾಯಿಸಿದರು.
ನನ್ನ ಜೀವನದ ಕೊನೆ ಉಸಿರಿರುವವರೆಗೂ ಅಂಬೇಡ್ಕರ್ ಸಿದ್ಧಾಂತದಲ್ಲಿಯೆ ಜೀವನ ನಡೆಸುತ್ತೇನೆ. ಅವರ ಚಿಂತನೆಗಳನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನು ಅಂಬೇಡ್ಕರ್‌ವಾದಿ ಎಂದೇಳಲು ಹೆಮ್ಮೆ ಎನಿಸುತ್ತದೆ.
ಸತೀಶ್ ಜಾರಕಿಹೊಳಿ, ಸಣ್ಣ ಕೈಗಾರಿಕೆ ಸಚಿವ.
ಕಾರ್ಯಕ್ರಮದಲ್ಲಿ ಕವಿ ಡಾ.ಸಿದ್ಧಲಿಂಗಯ್ಯ, ಹಂಪಿ ವಿವಿ ಕುಲಪತಿ ಪ್ರೊ.ಮಲ್ಲಿಕಾಘಂಟಿ, ಅಂಬೇಡ್ಕರ್‌ವಾದಿ ಕೃಷ್ಣಮೂರ್ತಿ, ಎಐಟಿ ಅಧ್ಯಕ್ಷ ಚಿನ್ನಸ್ವಾಮಿ, ಲೇಖಕ ಯೋಗೇಶ್ ಮಾಸ್ಟರ್, ವಕೀಲ ಅನಂತ್ ನಾಯಕ್, ಕರ್ನಾಟಕ ಬುದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್, ಕಾರ್ಯಾಧ್ಯಕ್ಷ ಎ.ಮಂಜುನಾಥ್ ಮತ್ತಿತರರಿದ್ದರು.







