‘ಬಿಜೆಪಿಯಿಂದ ದ್ವಂದ್ವ ನೀತಿ ರಾಜಕಾರಣ’
ಎತ್ತಿನಹೊಳೆ ಯೋಜನೆ

ಬೆಂಗಳೂರು, ಮೇ 21: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ದ್ವಂದ್ವ ನೀತಿ ರಾಜಕಾರಣವನ್ನು ಅನುಸರಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ವಿ.ಸದಾನಂದಗೌಡ ಅಧಿಕಾರಾವಧಿಯಲ್ಲಿ(2012ರ ಜು.13) 8323.50 ಕೋಟಿ ರೂ.ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು ಎಂದರು.
ಆದರೆ, ಸಾಗಣೆ ಭಾಗದ ರೇಖಾ ಅಂದಾಜು ಮತ್ತು ಏತ ಕಾಮಗಾರಿ ಭಾಗದ ವಿವರವಾದ ಅಂದಾಜು ಪತ್ರಿಕೆಯ ಮೊತ್ತವನ್ನು ಆಡಳಿತಾತ್ಮಕ ಅನುಮೋದನೆ ನೀಡುವಾಗ ಪರಿಗಣಿಸಿರಲಿಲ್ಲ. ನಂತರ ಅವುಗಳನ್ನು ಪರಿಗಣಿಸಿ 12,912.36 ಕೋಟಿ ರೂ.ಮೊತ್ತದ ಪರಿಷ್ಕೃತ ಯೋಜನಾ ವರದಿಗೆ 2014ರ ಫೆ.17ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಅವರು ಹೇಳಿದರು.
ಪಶ್ಚಿಮಕ್ಕೆ ಹರಿಯುವ ನದಿಗಳ ಒಟ್ಟು ಜಲಾನಯನ ಪ್ರದೇಶ 24,530 ಚ.ಕಿ.ಮೀ. ಇದ್ದು, ಇದರಲ್ಲಿ ನೇತ್ರಾವತಿ ನದಿಯ ಜಲಾನಯನ ಪ್ರದೇಶ 3,222 ಚ.ಕಿ.ಮೀ. ಮತ್ತು ಕುಮಾರಧಾರಾ ನದಿಯ ಜಲಾನಯನ ಪ್ರದೇಶ 1,799.32 ಚ.ಕಿ.ಮೀ. ಹಾಗೂ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಉಪಯೋಗಿಸ ಲಾಗುತ್ತಿರುವ ಒಟ್ಟು ಜಲಾನಯನ ಪ್ರದೇಶ 176.74 ಚ.ಕಿ.ಮೀ. ಸೇರಿದೆ ಎಂದು ಉಗ್ರಪ್ಪ ವಿವರಿಸಿದರು.
ರಾಜ್ಯದ ಇತರೆ ಜಲಾನಯನ ಪ್ರದೇಶದ ಎಲ್ಲ ನದಿ ಮೂಲಗಳು ನೀರಿನ ಕೊರತೆ ಎದುರಿಸುತ್ತಿರುವುದರಿಂದ ಅನಿವಾರ್ಯವಾಗಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದ ಅವಧಿ (ಜೂನ್‌ನಿಂದ ನವೆಂಬರ್)ಯಲ್ಲಿ ಹರಿದು ಯಥೇಚ್ಛವಾಗಿ ಸಮುದ್ರ ಸೇರುವ ಮಳೆ ನೀರನ್ನು ಉಪಯೋಗಿಸಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆಯ ಮುಖ್ಯಸಚೇತಕ ಪಿ.ಎಂ.ಅಶೋಕ್‌ಪಟ್ಟಣ್, ಶಾಸಕ ಡಾ.ಸುಧಾಕರ್ ಉಪಸ್ಥಿತರಿದ್ದರು.





