ಬಾಗ್ದಾದ್: ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರ ಮೇಲೆ ಗುಂಡೆಸೆತ
4 ಬಲಿ
ಬಾಗ್ದಾದ್,ಮೇ 21: ಇರಾಕ್ ರಾಜಧಾನಿ ಭಾಗ್ದಾದ್‌ನಲ್ಲಿ ಗರಿಷ್ಠ ಭದ್ರತಾ ವ್ಯವಸ್ಥೆಯಿರುವ ಗ್ರೀನ್ ರೆನ್ ಪ್ರದೇಶಕ್ಕೆ ಶುಕ್ರವಾರ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ 90 ಮಂದಿ ಗಾಯಗೊಂಡಿದ್ದಾರೆ. ಸರಕಾರಿ ಕಚೇರಿಗಳ ಕಟ್ಟಡಗಳು, ಸಂಸತ್ ಭವನ ಹಾಗೂ ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರನ್ನು ಚದುರಿಸಲು ಇರಾಕಿ ಭದ್ರತಾ ಪಡೆಗಳು ಗುಂಡು ಹಾರಿಸಿದರು ಹಾಗೂ ರಬ್ಬರ್ ಬುಲಟ್‌ಗಳನ್ನು ಪ್ರಯೋಗಿಸಿದರು. ಘರ್ಷಣೆಯಲ್ಲಿ ಮೃತಪಟ್ಟ ನಾಲ್ವರೂ ಕೂಡಾ ಗುಂಡಿನ ಗಾಯಗಳಿಂದಾಗಿಯೇ ಸಾವನ್ನಪ್ಪಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ಒಂದು ತಿಂಗಳಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು, ಬಾಗ್ದಾದ್‌ನ ಗ್ರೀನ್ ರೆನ್ ಮೇಲೆ ನಡೆಸಿದ ಎರಡನೆ ದಾಳಿ ಇದಾಗಿದೆ.
ಪ್ರತಿಭಟನಾಕಾರರಲ್ಲಿ ಇರಾಕ್‌ನ ಪ್ರಭಾವಿ ಶಿಯಾ ಮುಖಂಡ ಮುಖ್ತಾದ ಅಲ್ ಸದ್ರ್ ಅವರ ಬೆಂಬಲಿಗರು ಹಾಗೂ ಭ್ರಷ್ಟಾಚಾರ ನಿಗ್ರಹ ಕಾನೂನುಗಳಿಗೆ ಅನುಮೋದನೆ ನೀಡಲು ಹಾಗೂ ಐಸಿಸ್ ಉಗ್ರರ ಬಾಂಬ್ ದಾಳಿಯ ವಿರುದ್ಧ ಭದ್ರತೆಯನ್ನು ಬಲಪಡಿಸಲು ಸರಕಾರದ ವೈಫಲ್ಯದಿಂದ ಅಸಮಾಧಾನಗೊಂಡ ನಾಗರಿಕರೂ ಸೇರಿದ್ದಾರೆ.
ಹಿಂಸಾಚಾರದ ಬಳಿಕ ಸರಕಾರವು ಗ್ರೀನ್‌ರೆನ್ ಪ್ರದೇಶದಲ್ಲಿ ಕೆಲವು ತಾಸುಗಳ ಕಾಲ ಕರ್ಫ್ಯೂ ಹೇರಿತ್ತು. ಆನಂತರ ಅದು ಹೇಳಿಕೆಯೊಂದನ್ನು ನೀಡಿ, ಆ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಮರಳಿರುವುದಾಗಿ ತಿಳಿಸಿದೆ. ಈ ಮಧ್ಯೆ ಇರಾಕ್ ಪ್ರಧಾನಿ ಶುಕ್ರವಾರ ತಡರಾತ್ರಿ ನೀಡಿದ ಹೇಳಿಕೆಯೊಂದರಲ್ಲಿ ಗ್ರೀನ್‌ರೆನ್ ಪ್ರದೇಶದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ್ದಾರೆ. ಪ್ರತಿಯೊಬ್ಬ ಕಾನೂನುಭಂಜಕರ ವಿರುದ್ಧ ಕಾನೂನು ಅದರದೇ ಆದ ಕ್ರಮವನ್ನು ಕೈಗೊಳ್ಳಲಿದೆಯೆಂದು ಅವರು ಎಚ್ಚರಿಕೆ ನೀಡಿದರು.
ಏತನ್ಮಧ್ಯೆ ಶಿಯಾ ನಾಯಕ ಮೊಖ್ತಾದಾ ಅಲ್ ಸದ್ರ್ ಅವರು ಗ್ರೀನ್‌ರೆನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಭದ್ರತಾಪಡೆಗಳ ದೌರ್ಜನ್ಯವನ್ನು ಖಂಡಿಸಿದ್ದಾರೆ. ಸರಕಾರವು ತನ್ನದೇ ಮಕ್ಕಳನ್ನು ನಿಷ್ಕರುಣೆಯಿಂದ ಕೊಂದಿದೆ’’ ಎಂದವರು ಹೇಳಿದ್ದಾರೆ.







