‘ನೀರು, ಅರಣ್ಯ ಸಂಪತ್ತು ಸಂರಕ್ಷಿಸುವುದು ನಮ್ಮ ಕರ್ತವ್ಯ’
‘ಮನ್ ಕೀ ಬಾತ್’ನಲ್ಲಿ ಪ್ರಧಾನಮಂತ್ರಿ ಕರೆ

ಹೊಸದಿಲ್ಲಿ, ಮೇ 22: ದೇಶದಲ್ಲಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಮಾನ್ಸೂನ್ ವಿಳಂಬದಿಂದ ಜನರಿಗೆ ಆತಂಕ ಎದುರಾಗಿದೆ. ಜೂ.5ರಂದು ಪರಿಸರ ದಿನ ಆಚರಿಸಿಕೊಳ್ಳುತ್ತಿದ್ದು, ನಾವೆಲ್ಲ ಸೇರಿ ಹನಿ ಹನಿ ನೀರು ಸಂರಕ್ಷಿಸಬೇಕು. ನೀರಿನ ಸಮಸ್ಯೆ ರೈತರಿಗೆ ಮಾತ್ರವಲ್ಲ, ಎಲ್ಲರಿಗೂ ಇದೆ. ನೀರು ಹಾಗೂ ಅರಣ್ಯ ಸಂಪತ್ತಿನ ರಕ್ಷಣೆ ಎಲ್ಲರ ಕರ್ತವ್ಯ ಎಂದು 20ನೆ ಆವೃತ್ತಿಯ ‘ಮನ್‌ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಆಕಾಶವಾಣಿಯಲ್ಲಿ ಪ್ರಸಾರವಾಗುವ ಮನ್‌ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಮೋದಿ ಬರಗಾಲ, ನೀರು ಸಂರಕ್ಷಣೆ, ಸ್ವಚ್ಛ ಭಾರತ ಅಭಿಯಾನ, ಖಾದಿ ಪ್ರಚಾರ, ಕೌಶಲ್ಯ ಅಭಿವೃದ್ದಿ, ಬಡ ಮಕ್ಕಳಿಗೆ ವಿದ್ಯಾರ್ಥಿವೇತನ, ವಿದ್ಯಾ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯ, ಡ್ರಗ್ಸ್ ಬಗ್ಗೆ ಯುಕರಲ್ಲಿ ಜನಜಾಗೃತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಈಗಾಗಲೆ ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಮಂತ್ರಿ, ಗುಜರಾತ್ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಬರ ಪರಿಸ್ಥಿತಿ ತಗ್ಗಿಸಲು ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದು, ಇದರಲ್ಲಿ ಜನರು ಭಾಗಿದಾರರಾಗುವುದು ಅತ್ಯಂತ ಮುಖ್ಯ. ಹೆಚ್ಚಿನ ರಾಜ್ಯಗಳು ಬರಗಾಲ ತಗ್ಗಿಸಲು ಶತ ಪ್ರಯತ್ನ ನಡೆಸುತ್ತಿವೆ ಎಂದಿದ್ದಾರೆ.





