ಚೀನಾದಲ್ಲಿ ಭ್ರೂಣದೊಂದಿಗೇ ಹುಟ್ಟಿದ ಮಗು

ಬೀಜಿಂಗ್,ಮೇ 22: ತೀರಾ ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ವಾಯವ್ಯ ಚೀನಾದ ಮಹಿಳೆಯೊಬ್ಬರು, ಅವಳಿ ಸಹೋದರರಿಗೆ ಜನ್ಮ ನೀಡಿದ್ದು, ಈ ಪೈಕಿ ಒಂದು ಮಗುವಿನ ಹೊಟ್ಟೆ ಭಾಗದಲ್ಲಿ ಇನ್ನೊಂದು ಭ್ರೂಣ ಇರುವುದು ಪತ್ತೆಯಾಗಿದೆ.
ಕ್ಸಿಯಾನ್‌ನಲ್ಲಿ ಅವಧಿಪೂರ್ವವಾಗಿ ಈ ಅವಳಿ ಮಕ್ಕಳು ಹುಟ್ಟಿದ್ದು, ದೊಡ್ಡ ಹುಡುಗ ಹುಟ್ಟುವ ವೇಳೆ ಸುಮಾರು ಎರಡು ಕೆ.ಜಿ. ತೂಕವಿತ್ತು.
ವೈದ್ಯರು ಮಗುವಿನ ಹೊಟ್ಟೆಭಾಗದಲ್ಲಿ ಅಧಿಕ ತೂಕವಿರುವುದನ್ನು ಪರಿಶೀಲಿಸಿದಾಗ ಅವರಿಗೆ ಅಚ್ಚರಿಯ ವಿಷಯ ಗಮನಕ್ಕೆ ಬಂತು. ಈ ಭಾಗದಲ್ಲಿ ಮತ್ತೊಂದು ಭ್ರೂಣವಿದ್ದು, ಇದರಲ್ಲಿ ಎಲುಬು ಹಾಗೂ ಉಗುರು ಪತ್ತೆಯಾಯಿತು ಎಂದು ಚೀನಾ.ಓಆರ್‌ಜಿ ವರದಿ ಮಾಡಿದೆ. ಇದು ತೀರಾ ಅಪರೂಪದ ಪ್ರಕರಣವಾಗಿದ್ದು, ಸುಮಾರು ಐದು ಲಕ್ಷ ಮಕ್ಕಳ ಪೈಕಿ ಒಂದು ಇಂಥ ಪ್ರಕರಣ ವರದಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹದಿನೈದು ದಿನಗಳ ಬಳಿಕ ಇದನ್ನು ತೆಗೆಯಲಾಯಿತು. ಇದಕ್ಕೆ ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ.
Next Story





