ಬಿಜೆಪಿಯಿಂದ ಜಾಥಾ : ಎಕೆಜಿ ಭವನದ ಹತ್ತಿರ ಘರ್ಷಣೆ

ಹೊಸದಿಲ್ಲಿ, ಮೇ 22: ದಿಲ್ಲಿಯಲ್ಲಿರುವ ಸಿಪಿಎಂ ಕೇಂದ್ರ ಕಚೇರಿಗೆ ಬಿಜೆಪಿ ಕಾರ್ಯಕರ್ತರು ನಡೆಸಿದ ಜಾಥಾದಲ್ಲಿ ಭಾರೀ ಘರ್ಷಣೆ ನಡೆದಿದೆ. ಪೊಲೀಸರು ಇರಿಸಿದ್ದ ಬ್ಯಾರಿಕೇಡ್‌ಗಳನ್ನು ದಾಟಿದ ಕಾರ್ಯಕರ್ತರು ಎಕೆಜಿ ಭವನದ ನಾಮಫಲಕವನ್ನು ದ್ವಂಸಗೊಳಿಸಿದ್ದಾರೆ. ಕೇರಳದಲ್ಲಿ ಬಿಜೆಪಿ,ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ಪ್ರತಿಭಟಿಸಿ ಬಿಜೆಪಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಘರ್ಷಣಾ ಸ್ಥಿತಿಯನ್ನು ನಿವಾರಿಸಲು ಪೊಲೀಸರು ಭಾರೀ ಸಿದ್ಧತೆ ನಡೆಸಿದ್ದರು. ಆದರೆ ಬ್ಯಾರಿಕೇಡ್‌ಗಳನ್ನು ದಾಟಿ ಪ್ರತಿಭಟನಾಕಾರರು ಎಕೆಜಿ ಭವನದ ಬೋರ್ಡ್‌ನ್ನು ಹರಿದು ಹಾಕಿದರು. ಸಿಪಿಎಂ ಕೇಂದ್ರ ಕಚೇರಿಯ ಒಳಗಿದ್ದ ಸಿಪಿಎಂ ಕಾರ್ಯಕರ್ತರು ಹೊರಬಂದಾಗ ಭಾರೀ ಘರ್ಷಣೆ ನಡೆಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸದೆ ಪೊಲೀಸರು ನಿಷ್ಕ್ರೀಯರಾಗಿದ್ದರು. ನಂತರ ಪ್ರತಿಭಟನಾಕಾರರನ್ನುಪೊಲೀಸರು ಕಸ್ಟಡಿಗೆ ಪಡೆದರು. ಆಮೇಲೆ ಪ್ರತಿಭಟನೆ ಕೊನೆಗೊಂಡಿತೆಂದು ವರದಿಯಾಗಿದೆ. ತೃಶೂರ್ ಕೈಪಮಂಗಲದಲ್ಲಿ ಸಿಪಿಎಂ ವಿಜಯಾಚರಣೆಯ ವೇಳೆ ಬಿಜೆಪಿ ಮುಖಂಡನ ಕೊಲೆಯಾದ ಹಿನ್ನೆಲೆಯಲ್ಲಿ ಎಕೆಜಿ ಭವನಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿತ್ತು. ಸಿಪಿಎಂ ದಾಳಿಯನ್ನು ತಡೆಯದಿದ್ದರೆ ಪಾರ್ಲಿಮೆಂಟ್‌ನಲ್ಲಿಯೂ ಹೊರಗೆಯೂ ಎದುರಿಸಲಾಗುವುದು ಎಂದು ಕೆಂದ್ರ ಸಚಿವ ರವಿಶಂಕರ್ ಪ್ರಸಾದ್ ಗುಡುಗಿದ್ದರು. ದೇಶದಲ್ಲಿ ಮತ್ತು ಹದಿನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಇದೆ ಎಂಬುದು ನೆನಪಿರಲಿ ಎಂದು ಅವರು ಸಿಪಿಎಂಗೆ ಎಚ್ಚರಿಕೆ ನೀಡಿದ್ದರು. ಬಿಜೆಪಿ ನಾಯಕರ ಎಚ್ಚರಿಗೆ ಸಡ್ಡು ಹೊಡೆದ ಸಿಪಿಎಂ ನಾಯಕಿ ಬೃಂದಾ ಕಾರಟ್ ದೇಶದಲ್ಲಿ ಸಂವಿಧಾನ ಪ್ರಕಾರ ಆಳ್ವಿಕೆ ನಡೆಸಲಾಗುತ್ತಿದೆ, ಆರೆಸ್ಸೆಸ್ ಕಾನೂನು ಪ್ರಕಾರವಲ್ಲ ಎಂಬುದನ್ನು ಬಿಜೆಪಿ ನೆನಪಿಟ್ಟುಕೊಳ್ಳಲಿ ಎಂದು ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಬೆದರಿಕೆಯನ್ನು ಎದುರಿಸಿ ಗೊತ್ತಿದೆ ಎಂದು ಸಿಪಿಎಂ ಪ್ರಧಾನಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.





