ಪುತ್ತೂರು ಶ್ರೀ ಸತ್ಯಸಾಯಿ ಮಂದಿರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಪುತ್ತೂರು, ಮೇ 22: ಪುತ್ತೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಮತ್ತು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಯೋಗದಲ್ಲಿ ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರದಲ್ಲಿ ರವಿವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪದ್ಮನಾಭ ಪೈ ಮಾತನಾಡಿ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಉಚಿತ ಶಿಕ್ಷಣ, ಆರೋಗ್ಯ ತಪಾಸಣೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿಶ್ವದ ವಿವಿಧ ದೇಶಗಳಲ್ಲಿ ಸತ್ಯಸಾಯಿ ಸಮಿತಿಯಿಂದ ವೈದ್ಯಕೀಯ ಶಿಬಿರಗಳು ನಡೆಯುತ್ತಿವೆ ಎಂದರು.
ಮುಖ್ಯ ಅತಿಥಿ ಜಿಲ್ಲಾ ನೇತ್ರಾಧಿಕಾರಿ ಡಾ. ಶಾಂತರಾಜ್ ಕಣ್ಣಿನ ರಕ್ಷಣೆ, ಚಿಕಿತ್ಸೆ ಹಾಗೂ ಚಿಕಿತ್ಸೆಯ ಅನಂತರದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಮಿತಿಯ ಕಾಸರಗೋಡು ಮತ್ತು ಕೊಡಗು ಜಿಲ್ಲಾ ಅಧ್ಯಕ್ಷ ಶಿವರಾಮ ಭಟ್ ಕಜೆ, ಮಹಿಳಾ ಘಟಕದ ಅಧ್ಯಕ್ಷೆ ಪ್ರಿಯಾ ಪೈ, ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ. ಗೌರಿ ಪೈ, ಡಾ. ಮೀರಾಪ್ರಭು, ಡಾ. ಸುಮತಿ ಜಿ. ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್‌ನ ಅಧ್ಯಕ್ಷ ಡಾ. ಸತ್ಯಸುಂದರ್ ರಾವ್ ಸ್ವಾಗತಿಸಿದರು. ಸಂಚಾಲಕ ಚಂದ್ರಶೇಖರ್ ನಾಯಕ್ ವಂದಿಸಿದರು. ಮಂದಿರದ ಮುಖ್ಯಸ್ಥ ಪದ್ಮನಾಭ ಕಾರ್ಯಕ್ರಮ ನಿರ್ವಹಿಸಿದರು.







