ಕಲಾವಿದರಿಂದ ಕಲಾವಿದರಿಗೆ ನೆರವು ನೀಡುವ ಕೆಲಸ ಸಮಾಜಕ್ಕೆ ಮಾದರಿ -ಡಾ.ಶಾಂತಾರಾಮ ಶೆಟ್ಟಿ
ಯಕ್ಷಧ್ರುವ ಪಟ್ಲ ಸಂಭ್ರಮ 2016 -ಉದ್ಘಾಟನೆ

ಮಂಗಳೂರು,ಮೆ.22:ಕಲಾವಿದರಿಂದ ಕಲಾವಿರಿಗೆ ನೆರವು ನೀಡುವ ಕೆಲಸ ಸಮಾಜಕ್ಕೆ ಮಾದರಿಯಾಗಿದೆ ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ಶಾಂತರಾಮಶೆಟ್ಟಿ ತಿಳಿಸಿದರು.
ಅವರು ಇಂದು ನಗರದ ಪುರಭವನದಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ)ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರಮ 2016 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ಕಲಾ ಕ್ಷೇತ್ರದ ಕಲಾವಿದರನ್ನು ನೆನಪಿಸುವ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ವಿಮೆಯನ್ನು ಮಾಡುವ ಕೆಲಸ,ತುರ್ತು ಚಿಕಿತ್ಸೆಗೆ ನೆರವು ನೀಡುವ ಕೆಲಸಕ್ಕೆ ಮುಂದಾಗಿರುವುದು ಸಮಾಜಕ್ಕೆ ಮಾದರಿಯಾದ ಅನುಕರಣೀಯವಾದ ಕೆಲಸವಾಗಿದೆ.ಯಕ್ಷಗಾನದತ್ತ ಯುವ ಪೀಳಿಗೆ ವಿಮುಖವಾಗುತ್ತಿರುವ ಹಂತದಲ್ಲಿರುವ ಕಾಲ ಘಟ್ಟದಲ್ಲಿ ಸಾಗುತ್ತಿರುವಂತೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಯಕ್ಷರಂಗದಲ್ಲಿ ಹೊಸ ಹೊಸ ಯುವ ಪ್ರತಿಭೆಗಳು ಮುಂದೆ ಬರುತ್ತಿರುವುದು;ಪ್ರೇಕ್ಷಕ ವರ್ಗದಲ್ಲೂ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಾಗಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಶಾಂತರಾಮ ಶೆಟ್ಟಿ ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಶುಭ ಹಾರೈಸಿದರು.ಸಂಸದ ನಳಿನ್ ಕುಮಾರ್ ಕಟೀಲ್ ,ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ , ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫಫೇರ್ ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ,ಉದ್ಯಮಿ ಕವಿ ಶೆಟ್ಟಿ ಮೂಡಂಬೈಲು,ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಕದ್ರಿ ನವನೀತ ಶೆಟ್ಟಿ,ಬಲಿಪ ನಾರಾಯಣ ಭಾಗವತ,ನಿಟ್ಟೆ ವಿಶ್ವ ವಿದ್ಯಾನಿಲಯದ ಡೀನ್ ಡಾ.ಸತೀಶ್ ಭಂಡಾರಿ ,ಪುರುಷೋತ್ತಮ ಭಂಡಾರಿ ,ಸವಣೂರು ಸೀತಾರಾಮ ರೈ,ಪದ್ಮ ನಾಭ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.ಟ್ರಸ್ಟ್ ಅಧ್ಯಕ್ಷ ಪಟ್ಲ ಸತಿಶ್ ಶೆಟ್ಟಿ ಸ್ವಾಗತಿಸಿದರು.ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಆರಂಭದಲ್ಲಿ ಅಬ್ಬರ ತಾಳ ಹಾಗೂ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ ಪೂರ್ವರಂಗ ಪ್ರದರ್ಶನ ನಡೆಯಿತು.ಉದ್ಘಾಟನಾ ಸಮಾರಂಭದ ಬಳಿಕ ಯಕ್ಷಗಾನದ ಏಳು ಜನ ಭಾಗವತರ ಮೂಲಕ ಯಕ್ಷ ಸಪ್ತಸ್ವರ ಕಾರ್ಯಕ್ರಮ,ಸುರತ್ಕಲ್ ಶ್ರೀ ಸಿದ್ಧಿ ವಿನಾಯಕ ಯಕ್ಷ ನಾಟ್ಯ ಕಲಾ ಕೇಂದ್ರದ ಡಾ.ವರ್ಷಾ,ದಿಶಾ ಶೆಟ್ಟಿ ಯವರ ರಾಧಾವಿಲಾಸ ಯಕ್ಷ ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು.ನಿಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರ ಆರೋಗ್ಯ ತಪಾಸಣಾ ಶಿಬಿರ ,ರಕ್ತದಾನ ಶಿಬಿರ ನಡೆಯಿತು.







