ಖಡ್ಸೆ ಮತ್ತು ದಾವೂದ್ ಮಧ್ಯೆ ಫೋನ್ ಸಂಭಾಷಣೆ ನಡೆದಿಲ್ಲ: ಮುಂಬೈ ಪೊಲೀಸ್

ಆಮ್ ಆದ್ಮಿ ಪಕ್ಷದ ಪ್ರೀತಿ ಶರ್ಮಾ ಮೆನನ್ ಆಪಾದಿಸಿರುವಂತೆ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಡ್ಸೆ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಧ್ಯೆ ಯಾವುದೇ ರೀತಿಯ ಫೋನ್ ಸಂಭಾಷಣೆ ನಡೆದಿಲ್ಲ ಎಂದು ಮುಂಬೈ ಪೊಲೀಸ್ ಭಾನುವಾರ ತಿಳಿಸಿದೆ. ಖಡ್ಸೆಯರಿಗೆ ಸೇರಿದ ಮೊಬೈಲ್ ಫೋನ್ ಸಂಖ್ಯೆಯನ್ನು ಪರಿಶೀಲಿಸಿದಾಗ ಆ ಸಂಖ್ಯೆಯಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೊಬೈಲ್ ಸಂಖ್ಯೆಗೆ ಸೆಪ್ಟೆಂಬರ್ 2015ರಿಂದ ಎಪ್ರಿಲ್ 2016 ಅವಧಿಯಲ್ಲಿ ಯಾವುದೇ ಕರೆ ಬಂದಿಲ್ಲ ಹಾಗೂ ಹೋಗಿಲ್ಲ ಎಂದು ಮುಂಬೈಯ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಅತುಲ್‌ಚಂದ್ರ ಕುಲಕರ್ಣಿ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಪ್ ನಾಯಕ, ಖಡ್ಸೆ ಸೆಪ್ಟೆಂಬರ್ 4,2015ರಿಂದ ಎಪ್ರಿಲ್ 5,2016ರ ಅವಧಿಯಲ್ಲಿ ದಾವೂದ್ ಇಬ್ರಾಹಿಂನ ಪತ್ನಿ ಮೆಹ್ಜಬೀನ್ ಶೇಕ್‌ಳಿಂದ ಹಲವು ಬಾರಿ ಮೊಬೈಲ್ ಕರೆ ಸ್ವೀಕರಿಸಿದ್ದರು ಎಂದು ಆರೋಪಿಸಿದ್ದರು.
ಮೆನನ್ ಈ ಪ್ರಕರಣದ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದರು. ಇದೇ ವೇಳೆ ಖಡ್ಸೆ ತನ್ನ ಮೇಲಿನ ಆರೋಪವನ್ನು ಆಧಾರರಹಿತ ಎಂದು ತಳ್ಳಿ ಹಾಕಿದ್ದರು.
ಮಹಾರಾಷ್ಟ್ರ ಸರಕಾರದ ಮಂತ್ರಿಯ ಸಂಪರ್ಕವು ಮುಂಬೈಯ ಭೂಗತ ಜಗತ್ತಿನಿಂದ ಗಡಿಪಾರಾದ ದಾವೂದ್ ಜೊತೆ ಇದೆ ಎಂಬ ಅಂಶ ಬೆಳಕಿಗೆ ಬಂದಾಗ ನಾವು ವಿವರಗಳನ್ನು ಕಲೆ ಹಾಕಿದೆವು ಎಂದು ಕುಲಕರ್ಣಿ ತಿಳಿಸಿದ್ದಾರೆ.





