ವೆಮುಲಾ ಪ್ರಕರಣ: ಆಗಸ್ಟ್ ಒಳಗಾಗಿ ವರದಿ ಒಪ್ಪಿಸಲಿರುವ ತನಿಖಾ ಆಯೋಗ

ನವದೆಹಲಿ: ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾನ ಸಾವಿಗೆ ಸಂಬಂಧಪಟ್ಟಂತೆ ತನಿಖೆಯನ್ನು ನಡೆಸಲು ಮಾನವ ಸಂಪನ್ಮೂಲ ಸಚಿವಾಲಯ ನೇಮಕ ಮಾಡಿರುವ ಏಕಸದಸ್ಯ ಆಯೋಗಕ್ಕೆ ನೀಡಿದ್ದ ಸಮಯವನ್ನು ವಿಸ್ತರಿಸಲಾಗಿದ್ದು ಈ ವರ್ಷದ ಆಗಸ್ಟ್ 1ರ ಒಳಗಾಗಿ ಅದು ತನ್ನ ವರದಿಯನ್ನು ಒಪ್ಪಿಸಲಿದೆ.
ಮಾನವ ಸಂಪನ್ಮೂಲ ಸಚಿವಾಲಯವು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ.
ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ತೀವ್ರ ದಾಳಿ ನಡೆಸುವ ಮೂಲಕ ವೆಮುಲಾ ಆತ್ಮಹತ್ಯೆ ಪ್ರಕರಣ ಬೃಹತ್ ರಾಜಕೀಯ ಅಲೆಯನ್ನೇ ಎಬ್ಬಿಸಿತ್ತು.
ಅಧಿಕೃತ ಮೂಲಗಳ ಪ್ರಕಾರ, ನಿವೃತ್ತ ನ್ಯಾಯವಾದಿ ಅಶೋಕ್ ಕುಮಾರ್ ರೂಪನ್ವಾಲ್ ಆಯೋಗವು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ಭೇಟಿಯಾಗಿದೆ ಮತ್ತು ಅವರಿಂದ ಪಡೆದ ಅಷ್ಟೂ ವಿಷಯಗಳನ್ನು ಪರಿಶೀಲಿಸಿ ಒಂದು ನಿರ್ಣಯಕ್ಕೆ ಬರಲು ಇನ್ನೂ ಮೂರು ತಿಂಗಳ ಸಮಯಾವಕಾಶದ ಅಗತ್ಯವಿದೆ. ಹಾಗಾಗಿ ಸಚಿವಾಲಯವು ಆಯೋಗಕ್ಕೆ ನೀಡಿದ್ದ ಸಮಯವನ್ನು ಆಗಸ್ಟ್1, 2016ರ ವರೆಗೆ ವಿಸ್ತರಿಸಿದೆ.
ಇದಕ್ಕೂ ಮೊದಲು, ಬೃಹತ್ ರಾಜಕೀಯ ಅಲೆಯನ್ನೇ ಎಬ್ಬಿಸಿದ ವೆಮುಲಾ ಸಾವಿಗೆ ಸಂಬಂಧಪಟ್ಟಂತೆ ಸಚಿವಾಲಯವು ಜನವರಿಯಲ್ಲಿ ನ್ಯಾಯಾಂಗ ಆಯೋಗವನ್ನು ನೇಮಿಸಿ ಆ ಮೂಲಕ ಇಡೀ ಪ್ರಕರಣದ ನಡೆದ ರೀತಿ ಮತ್ತು ಸಾದರ್ಭಿಕತೆಯನ್ನು ಪರಿಶೀಲಿಸುವ ಮತ್ತು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಸತ್ಯಾಂಶವನ್ನು ತಿಳಿಯಲು ನಿರ್ಧರಿಸಿತ್ತು.







