ಒತ್ತಡ ಮುಕ್ತ ಜೀವನಕ್ಕೆ ನಗು ಅಗತ್ಯ: ಸಾಹಿತಿ ಪ್ರಭಾ ಶಂಕರ್

ಸಾಗರ , ಮೇ 22: ಒತ್ತಡ ಮುಕ್ತ ಬದುಕಿಗೆ ನಗುವುದು ತೀರಾ ಅಗತ್ಯ ಎಂದು ಸಿದ್ದಾಪುರದ ಖ್ಯಾತ ವೈದ್ಯ ಹಾಗೂ ಸಾಹಿತಿಗಳಾದ ಡಾ. ಪ್ರಭಾಶಂಕರ ಗಣೇಶ ಹೆಗಡೆ ಕಿಲಾರ ಹೇಳಿದರು. ಇಲ್ಲಿನ ಬ್ರಾಸಂ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಏರ್ಪಡಿಸಿದ್ದ ‘ತಿಂಗಳ ಬೆಳದಿಂಗಳು’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಬದುಕಿನ ನೆಮ್ಮದಿಗೆ ವೃತ್ತಿಯ ಜೊತೆ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಮನುಷ್ಯನ ಒಳಗಿರುವ ಸುಪ್ತ ಮನಸ್ಸು ಬುದ್ಧಿಯ ತಪ್ಪು ಮತ್ತು ಸರಿಗಳನ್ನು ಗ್ರಹಿಸುತ್ತದೆ. ಎಲ್ಲ ಕ್ರಿಯೆಗಳನ್ನು ಸುಪ್ತ ಮನಸ್ಸು ಹಿಡಿತದಲ್ಲಿರಿಸಿ ಕೊಂಡು ಶಾಂತ ಸ್ಥಿತಿ ನಿರ್ಮಾಣವಾಗಲು ಪೂರಕ ಕೆಲಸ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ನಗು ಬೇಕು. ನಗುವಿನೊಂದಿಗೆ ಜೀವನ ಸಾಗಬೇಕು ಎಂದರು.ಕಸಾಪ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನ ಕುಳಿ, ಸಾಹಿತ್ಯದ ಸಾಂಗತ್ಯ ಹೊಂದಿದಾಗ ಬದುಕು ಹಸನಾಗುತ್ತದೆ. ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡರೆ ಮನಸ್ಸು ಹಾಗೂ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ ಎಂದು ನುಡಿದರು.
ಕಸಾಪ ತಾಲೂಕು ಶಾಖೆ ಅಧ್ಯಕ್ಷ ಎಸ್.ವಿ. ಹಿತಕರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಷತ್ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಜೊತೆಗೆ ಸಮಾಜ ಮುಖಿಯಾಗಿಯೂ ಕೆಲಸ ಮಾಡುವ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿ ಪಾರದರ್ಶಕವಾಗಿ ಕೆಲಸ ಮಾಡುವ ಮೂಲಕ ಸಂಘಟನಾತ್ಮಕ ಶಕ್ತಿ ಬೆಳೆಸಿ ಕೊಳ್ಳುತ್ತಿದೆ ಎಂದರು.
ಪರಿಷತ್ ಕೋಶಾಧ್ಯಕ್ಷ ನಾರಾಯಣಮೂರ್ತಿ ಸ್ವಾಗತಿಸಿದರು. ಗಂಗಮ್ಮ ವಂದಿಸಿದರು. ಜಿ.ಆರ್. ಪಂಡಿತ್ ನಿರೂಪಿಸಿದರು.





