‘ಕನ್ನಡ ಭಾಷೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ’

ಸೊರಬ,ಮೇ 22: ವಿಜ್ಞಾನ ಹಾಗೂ ತಂತ್ರಜ್ಞಾನವು ಮುಂದುವರಿದಿರುವ ಇಂದಿನ ಕಾಲಘಟ್ಟದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಅನಿತ್‌ಕುಮಾರ್ ಸಿ ಚಗಟೂರು ಹೇಳಿದ್ದಾರೆ.
ಪಟ್ಟಣದ ಮುರುಘಾ ಮಠದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ವೈಜ್ಞ್ಞಾನಿಕ ತಳಹದಿಯಲ್ಲಿ ಕನ್ನಡ ಸಾಹಿತ್ಯ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ವಿಜ್ಞ್ಞಾನದ ಕೊಡುಗೆ ಅಪಾರವಾಗಿದೆ. ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕನ್ನಡವನ್ನು ಕಲಿಸುವ ಜೊತೆಗೆ ಕಡ್ಡಾಯಗೊಳಿಸಬೇಕು ಎಂದ ಅವರು, ಭಾಷೆಗಳು ಸರಳೀಕರಣಗೊಳ್ಳಬೇಕಿವೆೆ. ಪ್ರತಿಯೊಬ್ಬರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬಂದಾಗ ಅಭಿವೃದ್ಧಿ ಸಾಧ್ಯವಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಬಲೇಶ್ವೇರ ಹೆಗಡೆ ಮಾತನಾಡಿ, ಕೇವಲ ಭಾಷಣಗಳಿಂದ ಕನ್ನಡದ ಉಳಿವು ಸಾಧ್ಯವಿಲ್ಲ ಆಂದೋಲನದ ಆವಶ್ಯಕತೆ ಇದೆ ಎಂದ ಅವರು, ಕನ್ನಡ ಕೇವಲ ಕಲಿಕೆಗೆ ಸೀಮಿತವಾಗಬಾರದು, ನಮ್ಮ ದೈನಂದಿನ ಜೀವನದಲ್ಲಿ ನಿತ್ಯೋತ್ಸವವಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುತಿಸಿ ಗೌರವಿಸುವ ಕೆಲಸ ಕಸಾಪದಿಂದ ನಡೆಯುತ್ತಿದ್ದು, ಇಂದು ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಸದಾ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು. ಇದೇ ಸಂದಭರ್ದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕಗಳಿಸಿದ ಆನವಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿ ಟಿ. ಅರ್ಪಿತಾ ಹಾಗೂ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಿರೆಮಾಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಎಂ. ಪೂಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ದುಂಡಸಿ ಮಠದ ಪ್ರಭು ಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಪಪಂ ಉಪಾಧ್ಯಕ್ಷೆ ನೇತ್ರಾವತಿ ಕುಮಾರ್ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಹಾಲೇಶ್ ನವುಲೆ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ ಶಿವಾನಂದ ಪಾಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಪ್ರಕಾಶ್ ಮಡ್ಲೂರ್, ತಾಲೂಕು ಅಧ್ಯಕ್ಷ ಕೆ.ಸಿ. ಶಿವಕುಮಾರ್, ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್, ಯುವ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಭಂಡಾರಿ, ನೆಮ್ಮದಿ ಸುಬ್ಬು, ಪ್ರಮುಖರಾದ ಪಾಣಿ ರಾಜಪ್ಪ, ದೇವಕಿ ಪಾಣಿ ರಾಜಪ್ಪ, ಎಂ.ಎಸ್. ಕಾಳಿಂಗರಾಜ್, ದೀಪಕ ಧೋಂಗಡೇಕರ್, ಎಂ.ಎನ್. ಗುರುಮೂರ್ತಿ, ಸಂಪತ್ ಕುಮಾರ್, ಅನ್ವರ್ ಬಾಷಾ ಮುಲ್ಲಾ, ಮೃತ್ಯುಂಜಯ ಗೌಡ ಮತ್ತಿತರರು ಉಪಸ್ಥಿತರಿದ್ದರು.





