ಮನುಕುಲದ ಸೇವೆಯೇ ರೋಟರಿಯ ಆಶಯ: ವಿನೋದ್‌ಬನ್ಸಾಲ್

ಚಿಕ್ಕಮಗಳೂರು, ಮೇ22: ಮನುಕುಲದ ಸೇವೆಯೇ ರೋಟರಿಯ ಆಶಯ. ಜಾಗತಿಕ ಮಟ್ಟದಲ್ಲಿ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಿ, ವೃತ್ತಿಕ್ಷಮತೆ ಉತ್ಕರ್ಷಗೊಳಿಸಿ ಸೇವಾಕಾರ್ಯಕ್ಕೆ ದೊಡ್ಡ ಸಮುದಾಯವನ್ನು ಅಣಿಗೊಳಿಸುವ ಕಾರ್ಯ ರೋಟರಿ ಮಾಡುತ್ತಿದೆ ಎಂದು ಹುಬ್ಬಳ್ಳಿ ವಾಣಿಜ್ಯೋದ್ಯಮಿ ಪಿಡಿಜಿ ವಿನೋದ್ ಬನ್ಸಾಲ್ ಅಭಿಪ್ರಾಯಿಸಿದ್ದಾರೆ.
ಚಿಕ್ಕಮಗಳೂರು ರೋಟರಿ ಕ್ಲಬ್ ಎಐಟಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಸಂಪದ ರೋಟರಿ ಜಿಲ್ಲೆ 3,182 ಜಿಲ್ಲಾ ತರಬೇತಿ ಪ್ರಥಮ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರುಣೆ, ಉದಾತ್ತತೆ, ದಾನಸ್ವಭಾವ ಮತ್ತು ಸೇವಾ ಮನೋಭಾವ ನಮ್ಮ ಕೃತಿಯಲ್ಲಷ್ಟೇ ಅಲ್ಲ ಆಲೋಚನೆಯಲ್ಲೂ ಸಹಜವಾಗಿ ಮೂಡಬೇಕು. ರೋಟರಿ ಸದಸ್ಯರಾದವರು ಮೊದಲು ಒಳ್ಳೆಯ ಪೌರನಾಗುತ್ತಾನೆ. ನೆಲದ ಕಾನೂನನ್ನು ಗೌರವಿಸಿ ಮಾದರಿಯಾಗಿ ನಡೆದುಕೊಳ್ಳುತ್ತಾನೆ. ನಡೆನುಡಿಗಳಲ್ಲಿ ಸದ್ಭಾವನೆ ಪ್ರೀತಿ-ವಿಶ್ವಾಸವನ್ನು ಹಂಚುವುದರಿಂದ ರೋಟರಿಯ ಪ್ರತಿಮೆ ಸಮಾಜದಲ್ಲಿ ಹೆಚ್ಚುತ್ತದೆ ಎಂದರು.
ಜಿಲ್ಲಾ ತರಬೇತುದಾರ ಎಸ್.ಕೆ.ನಾಗೇಂದ್ರನ್ ಮಾತನಾಡಿ, ರೋಟರಿ ಸದಸ್ಯರ ಕೌಶಲ್ಯ ವ್ಯಕ್ತಿತ್ವ ವಿಕಸನಕ್ಕೆ ಈ ಕಾರ್ಯಾಗಾರ ಸಹಕಾರಿ. ವ್ಯಕ್ತಿಯ ಆಂತರಿಕ ಬೆಳವಣಿಗೆಗೆ ತರಬೇತಿಗಳು ಅತ್ಯಗತ್ಯ. ಇದರಿಂದ ವ್ಯಕಿತ್ವ ಸುಧಾರಿಸುತ್ತದೆ. ಆ ಮೂಲಕ ಪ್ರಭಾವ ಶಾಲಿಯಾಗಿಸಿ ಪ್ರಾಮುಖ್ಯತೆಯನ್ನು ತಂದುಕೊಡುತ್ತದೆ ಎಂದು ಹೇಳಿದರು.
ರೋಟರಿ ಸಮ್ಮೇಳನದ ಪ್ರಥಮ ಪತ್ರಿಕೆ ಹೂಮಳೆಯನ್ನು ರಾಜೇಂದ್ರರೈ ಲೋಕಾರ್ಪಣೆಗೊಳಿಸಿದರು.





