ಗೌರವದಿಂದ ಬದುಕಲು ಮಾನವ ಹಕ್ಕು ಅಗತ್ಯ:ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ

ಚಿಕ್ಕಮಗಳೂರು, ಮೇ 22: ಮನುಷ್ಯ ಗೌರವದಿಂದ ಬದುಕಲು ಮಾನವ ಹಕ್ಕುಗಳು ಬೇಕು. ಆ ನಿಟ್ಟಿನಲ್ಲಿ ಬಡವರಿಗೆ ಸೂರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹರಿಗೆ ಈ ಸೌಲಭ್ಯ ಕಲ್ಪಿಸುವಾಗ ಕಾನೂನು, ಕಟ್ಟಳೆ ಅಡ್ಡಿಯಾದರೆ ಆ ಬಗ್ಗೆ ಸರಕಾರಿ ನೌಕರರು ಮನವರಿಕೆ ಮಾಡಿಕೊಡುವುದು ಅವರ ಕರ್ತವ್ಯವಾಗಿದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಹೇಳಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮನುಷ್ಯ ಹೇಗಾದರೂ ಜೀವಿಸಬಹುದು. ಆದರೆ ಗೌರವದಿಂದ ಬದುಕಲು ಮಾನವ ಹಕ್ಕುಗಳು ಅಗತ್ಯ. ಆಯೋಗಕ್ಕೆ ಈ ಹಿಂದೆ ಪೊಲೀಸರ ಕಿರುಕುಳ, ಹಿಂಸೆ, ಲಾಕಪ್‌ಡೆತ್ ಬಗ್ಗೆ ಮಾತ್ರ ದೂರುಗಳು ಬರುತ್ತಿದ್ದವು. ಆದರೆ ಈಗ ಗೌರವದಿಂದ ಬದುಕುವ ಅಗತ್ಯವಾದ ಮೂಲ ಭೂತ ಹಕ್ಕುಗಳ ಕೊರತೆ ಬಗ್ಗೆಯೂ ದೂರುಗಳು ಬರುತ್ತಿವೆ. ಅನೇಕ ಕಡೆ ಕುಡಿಯುವ ನೀರು, ಶೌಚಾಲಯ, ಶಾಲಾ ಕೊಠಡಿ, ಆಸ್ಪತ್ರೆಯಲ್ಲಿನ ಸ್ವಚ್ಛತೆ, ಬಿಸಿಯೂಟದಲ್ಲಿನ ಲೋಪ, ವೈದ್ಯರ ಕೊರತೆ ಮುಂತಾದ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಲಾಗುತ್ತಿದೆ ಎಂದು ನುಡಿದರು.
ಜನರಿಗೆ ಅಂತಹ ಮೂಲಭೂತ ಸೌಕರ್ಯ ಕಲ್ಪಿಸುವುದು ಸರಕಾರಗಳ ಹೊಣೆ. ಈ ನಿಟ್ಟಿನಲ್ಲಿ ಅಪಾರ ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸೌಲಭ್ಯ ಕಲ್ಪಿಸುವುದು ಸರಕಾರದ ಸಿಬ್ಬಂದಿಯ ಹೊಣೆಯಾಗಿದೆ. ಕಾನೂನು, ನಿಯಮಗಳು ಅಡ್ಡಿಯಾದರೆ ಆ ಬಗ್ಗೆ ಅರ್ಹರಿಗೆ ಮನವರಿಕೆ ಮಾಡಿ ಕೊಡಬೇಕಾದುದು ಕೂಡ ಸಿಬ್ಬಂದಿಯ ಜವಬ್ದಾರಿ ಎಂದು ಹೇಳಿದರು.
ಈ ಜಿಲ್ಲೆಯಿಂದ 945 ದೂರು ದಾಖಲಾಗಿದ್ದು, ಅದರಲ್ಲಿ 752 ವಿಲೇವಾರಿ ಮಾಡಲಾಗಿದೆ. ಉಳಿದವು ವಿವಿಧ ಹಂತದಲ್ಲಿವೆ. ಇತ್ತೀಚೆಗೆ ನಗರದ ಎಐಟಿ ಕಾಲೇಜಿನ ಪ್ರಾಂಶುಪಾಲರು ನೂರಾರು ವರ್ಷಗಳಿಂದ ಬಳಕೆಗೆ ಇದ್ದ ದಾರಿಯನ್ನು ಮುಚ್ಚಿದ್ದು, ಅದರಿಂದ ಓಡಾಡಲು ತೊಂದರೆ ಆಗಿದೆ ಎಂಬ ದೂರು ಬಂದಿದೆ. ಉಳಿದಂತೆ ತರೀಕೆರೆಯಲ್ಲಿ ಕಲ್ಲುಕ್ವಾರಿಯಿಂದಾಗುವ ತೊಂದರೆ, ಹೇಮಾವತಿ ನದಿಯಲ್ಲಿ ಅಕ್ರಮ ಮರಳು ದಂಧೆ ಹೀಗೆ ಬೇರೆಬೇರೆ ಸಮಸ್ಯೆಗಳ ಬಗ್ಗೆ ದೂರು ಬಂದಿದೆ ಎಂದರು.
ಅಕ್ರಮ ಸಕ್ರಮದಲ್ಲಿ ಹಕ್ಕುಪತ್ರ ದೊರೆಯದಿರುವುದು, ಸಾಗುವಳಿ ಚೀಟಿ, ಅರಣ್ಯಭೂಮಿಗಳ ಸಮಸ್ಯೆಗಳ ಬಗ್ಗೆಯೂ ತಮ್ಮ ಆಯೋಗಕ್ಕೆ ದೂರುಗಳು ಬಂದಿವೆ. ಅರಣ್ಯ ಕಾಯ್ದೆಯಂತೆ ಕಾಡಿನ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ನೀಡುವಂತಿಲ್ಲ. ಕುಡಿಯುವ ನೀರು ಒದಗಿಸುವುದಕ್ಕೆ ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕು. ಅರಣ್ಯ ವಾಸಿಗಳು ಹಾಗೂ ಬುಡಕಟ್ಟು ಜನರಿಗಾಗಿ ರೂಪಿಸಿದ ಕಾಯ್ದೆಯಲ್ಲಿ ವೈಯಕ್ತಿಕ ಮತ್ತು ಸಾಮೂಹಿಕವಾಗಿ ಕೆಲವು ಶರತ್ತುಗಳಡಿ ಅರಣ್ಯ ಬಳಕೆಗೆ ಅವಕಾಶವಿದೆ. ಅದನ್ನು ಹೊರತುಪಡಿಸಿ ಅರಣ್ಯನಾಶಕ್ಕೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಅಂತಹ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದವರಿಗೆ ಮನವರಿಕೆ ಮಾಡಿಕೊಡಬೇಕೆಂದರು.
ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿಸ್ವಾಮಿ, ಜಿಪಂ ಸಿಇಒ ಡಾ. ರಾಗಪ್ರಿಯ, ಎಸ್ಪಿ ಸಂತೋಷ್‌ಬಾಬು ಉಪಸ್ಥಿತರಿದ್ದರು.







