ಅಂಧರಿಗೆ ಸಹಾನುಭೂತಿಗಿಂತ ಸಹಾಯ ಅಗತ್ಯ: ಸಾಹಿತಿ ಡಾ. ನಾ. ಡಿಸೋಜ
ಸಾಗರ: ಗಾನವೈವಿಧ್ಯ ಕಾರ್ಯಕ್ರಮ
.jpg)
ಸಾಗರ, ಮೇ 22: ಅಂಧರಿಗೆ ಅನುಕಂಪ, ಸಹಾನುಭೂತಿಗಿಂತ ಅವರಿಗೆ ಅಗತ್ಯ ಸಹಾಯವನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯವಿದೆ ಎಂದು ಸಾಹಿತಿ ಡಾ. ನಾ. ಡಿಸೋಜ ಹೇಳಿದ್ದಾರೆ.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಶನಿವಾರ ನವಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸಹಾಯಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಗಾನವೈವಿಧ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಸ್ತುತ ಎಲ್ಲ ಅವಯವಗಳು ಸರಿಯಾಗಿ ಇದ್ದವರೂ ಎಲ್ಲವನ್ನೂ ಪಡೆದಿದ್ದೇವೆ ಎಂಬ ಅಹಂಕಾರದಿಂದ ವರ್ತಿಸುತ್ತಾರೆ. ನಿಜಾರ್ಥದಲ್ಲಿ ಎಲ್ಲವನ್ನೂ ಕಳೆದುಕೊಂಡವರೇ ಎಲ್ಲವನ್ನು ಪಡೆದಿರುತ್ತಾರೆ. ಎಲ್ಲವನ್ನೂ ಕಳೆದುಕೊಂಡವರಲ್ಲಿ ಕಪಟ ಇರುವುದಿಲ್ಲ. ಇವರು ಬದುಕನ್ನು ನೋಡುವ, ಎದುರಿಸುವ ರೀತಿ ಎಲ್ಲರಿಗೂ ಅನುಕರಣೀಯವಾಗಬೇಕು ಎಂದ ಅವರು, ಅಂಧ ಕಲಾವಿದರಲ್ಲಿರುವ ಪ್ರತಿಭೆಯನ್ನು ಗೌರವಿಸಿ, ಸೂಕ್ತ ನೆರವು ಕಲ್ಪಿಸಿದರೆ ಸಮಾಜಕ್ಕೆ ಅವರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಡಿ.ಎಂ.ಸತೀಶಕುಮಾರ್ ಮಾತನಾಡಿ, ಅಂಧರೆಂಬ ಕೀಳರಿಮೆ ಇರಿಸಿಕೊಳ್ಳದೆ ಇವರು ಬದುಕನ್ನು ಎದುರಿಸಲು ಕಂಡುಕೊಂಡ ಕಲಾಸೇವೆ ನಿಜಕ್ಕೂ ಗಮನಾರ್ಹವಾದದ್ದು. ಕಣ್ಣಿದ್ದವರು ತಮ್ಮ ಮನಸ್ಸನ್ನು ಕೆಡಿಸಿಕೊಂಡು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಹೊತ್ತಿನಲ್ಲಿ ಅಂಧ ಕಲಾವಿದರ ತಂಡವನ್ನು ಕಟ್ಟಿಕೊಂಡು ಬಸವರಾಜ್ ಮತ್ತು ಸಂಗಡಿಗರು ನಡೆಸುತ್ತಿರುವ ಸಂಗೀತ ಸೇವೆ ಮೌಲ್ಯಯುತವಾದದ್ದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಹಾಗೂ ಅಂಧ ಕಲಾವಿದ ಕೆ.ಆರ್.ಬಸವರಾಜ್, ಇಂತಹ ಕಾರ್ಯ ಕ್ರಮಗಳಲ್ಲಿ ಸಂಗ್ರಹವಾಗುವ ಹಣವನ್ನು ಅಂಗವಿಕಲರ ಕ್ಷೇಮಾಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಶಿವಮೊಗ್ಗದಲ್ಲಿ ಅಂಗವಿಕಲರಿಗಾಗಿ ಕಂಪ್ಯೂಟರ್ ತರಬೇತಿ, ಸಂಗೀತ ಶಾಲೆ, ಉಚಿತ ವಸತಿ ಶಾಲೆ ಇನ್ನಿತರ ತೆರೆಯುವ ಉದ್ದೇಶ ಸಂಸ್ಥೆ ಹೊಂದಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉದ್ಯಮಿ ಯು.ಜಿ.ಶ್ರೀಧರ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್ ಸ್ವಾಗತಿಸಿ, ಸುನಂದಾ ಶ್ರೀಧರ್ ಪ್ರಾಸ್ತಾವಿಕ ಮಾತನಾಡಿದರು. ಎಂ.ನಾಗರಾಜ್ ನಿರೂಪಿಸಿದರು. ನಂತರ ಕೆ.ಆರ್.ಬಸವರಾಜ್ ಮತ್ತು ತಂಡದವರಿಂದ ಗಾನವೈವಿಧ್ಯ ಕಾರ್ಯಕ್ರಮ ನಡೆಯಿತು.







