ಹಳೆ ಚಿಕ್ಕನಹಳ್ಳಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಒತ್ತಾಯ

ದಾವಣಗೆರೆ, ಮೇ 22: ನಗರದ ಯರಗುಂಟೆ ಗುಡಿಸಲು ಹಾಗೂ ಹಳೆ ಚಿಕ್ಕನಹಳ್ಳಿ ನಿವಾಸಿಗಳಿಗೆ ನಿವೇಶನದ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದರು.
ಈ ಸಂದಭರ್ ದಲಿತ ಸಂಘರ್ಷ ಸಮಿತಿ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದಲೂ ನಗರದ ಎಪಿಎಂಪಿ ಹಿಂಭಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿರುವವರು ಮೂಲಭೂತ ಸೌಲಭ್ಯಗಳಿಲ್ಲದೆ ಹೀನಾಯವಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದಾಗ ಮಹಾನಗರ ಪಾಲಿಕೆ ವತಿಯಿಂದ ಶೀಟ್ ಗುಡಿಸಲುಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ, ಅವು ಸಹ ವಾಸಕ್ಕೆ ಯೋಗ್ಯವಾಗಿರದೇ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಹಳೆ ಚಿಕ್ಕನಹಳ್ಳಿ ಹಾಗೂ ಯರಗುಂಟೆ ಗುಡಿಸಲು ನಿವಾಸಿಗಳಿಗೆ ನಿವೇಶನದ ಹಕ್ಕು ಪತ್ರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಕುರಿತು ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ. ಯರಗುಂಟೆಯಲ್ಲಿ ವಸತಿ ರಹಿತರು ಸರಕಾರಿ ಜಾಗದಲ್ಲಿಯೇ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದರೂ ಸಹ ಅವರಿಗೆ ಹಕ್ಕು ಪತ್ರ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು. ಧರಣಿಯಲ್ಲಿ ಕಬ್ಬಳ್ಳಿ ಮೈಲಪ್ಪ, ರಾಮಚಂದ್ರಪ್ಪ, ಹನುಮಂತಪ್ಪ, ನಿಂಗರಾಜ್, ಸುರೇಶ್, ಕುಮಾರ್, ಚಿಕ್ಕನಹಳ್ಳಿ ಹನುಮಂತಪ್ಪ, ಅಣ್ಣಪ್ಪ, ಬೇತೂರು ಕುಮಾರ್ ಉಪಸ್ಥಿತರಿದ್ದರು.







