ಪ್ರಧಾನಿ ಇರಾನ್ ಪ್ರವಾಸ ಆರಂಭ : ವಾಣಿಜ್ಯ, ಇಂಧನ ಕ್ಷೇತ್ರದಲ್ಲಿ ಬಾಂಧವ್ಯ ವೃದ್ಧಿ ನಿರೀಕ್ಷೆ

ಟೆಹರಾನ್,ಮೇ 22: ವಾಣಿಜ್ಯ, ಹೂಡಿಕೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ಉಭಯದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಎರಡು ದಿನಗಳ ಇರಾನ್ ಭೇಟಿಗಾಗಿ ರವಿವಾರ ಟೆಹರಾನ್‌ನಲ್ಲಿ ಬಂದಿಳಿದರು. ಆಯಕಟ್ಟಿನ ಚಬ್ಬರ್ ಬಂದರನ್ನು ಅಭಿವೃದ್ಧಿ ಪಡಿಸುವ ಕುರಿತಾದ ನಿರ್ಣಾಯಕ ಒಪ್ಪಂದಕ್ಕೆ ಪ್ರಧಾನಿ ತನ್ನ ಇರಾನ್ ಪ್ರವಾಸದ ಸಂದರ್ಭದಲ್ಲಿ ಸಹಿಹಾಕುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿ ಕಳೆದ 15 ವರ್ಷಗಳಲ್ಲಿ ಇರಾನ್‌ಗೆ ಭೇಟಿ ನೀಡಿದ ಪ್ರಪ್ರಥಮ ಭಾರತೀಯ ಪ್ರಧಾನಿಯಾಗಿದ್ದಾರೆ. ಇಂದು ವಿಶೇಷ ವಿಮಾನದ ಮೂಲಕ ಅವರು ಟೆಹರಾನ್‌ನ ಮೆಹರಾಬಾದ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಅವರನ್ನು ಇರಾನ್‌ನ ವಿತ್ತ ಹಾಗೂ ಹಣಕಾಸು ವ್ಯವಹಾರಗಳ ಸಚಿವ ಅಲಿ ತಯ್ಯೆಬಿನಾ ಸ್ವಾಗತಿಸಿದರು. ಆನಂತರ ಅವರು ಸ್ಥಳೀಯ ಗುರುದ್ವಾರಕ್ಕೆ ತೆರಳಿದ್ದು, ಅಲ್ಲಿ ಅನಿವಾಸಿ ಭಾರತೀಯರ ಜೊತೆ ಮಾತುಕತೆ ನಡೆಸಿದರು.
ನಾಳೆ ಬೆಳಗ್ಗೆ ಪ್ರಧಾನಿಯವರಿಗೆ ಭದ್ರತಾಪಡೆಗಳ ಗೌರವರಕ್ಷೆಯೊಂದಿಗೆ ವಿಧ್ಯುಕ್ತವಾಗಿ ಸ್ವಾಗತಿಸಲಾಗುವುದು. ಆನಂತರ ಮೋದಿ, ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ಜೊತೆ ಮಾತುಕತೆ ನಡೆಸಲಿರುವರು. ಆನಂತರ ಅವರು ರೂಹಾನಿ ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಭಾರತಕ್ಕೆ ನಿರ್ಗಮಿಸುವ ಮುನ್ನ ಮೋದಿಯವರು, ಇರಾನ್‌ನ ಸರ್ವೋಚ್ಛ ನಾಯಕ ಅಯಾತುಲ್ಲಾ ಅಲಿ ಖಮೇನಿಯವರನ್ನು ಕೂಡಾ ಭೇಟಿಯಾಗಲಿದ್ದಾರೆ.
ಇರಾನ್‌ಗೆ ನಿರ್ಗಮಿಸುವ ಮುನ್ನ ಪ್ರಧಾನಿ ಟ್ವಿಟರ್‌ನಲ್ಲಿ ಪ್ರಸಾರ ಮಾಡಿದ ಸಂದೇಶವೊಂದರಲ್ಲಿ, ‘‘ ಅಧ್ಯಕ್ಷ ರೂಹಾನಿ ಹಾಗೂ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಜೊತೆಗೆ ನಾನು ನಡೆಸಲಿರುವ ಮಾತುಕತೆಯು ಉಭಯದೇಶಗಳ ಆಯಕಟ್ಟಿನ ಬಾಂಧವ್ಯವನ್ನು ಬಲಪಡಿಸುವ ಅವಕಾಶವನ್ನು ಒದಗಿಸಲಿದೆ’’ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದರು.
ಇರಾನ್‌ನ ಚಬ್ಬರ್ ಬಂದರಿನ ಮೊದಲ ಹಂತದ ಅಭಿವೃದ್ಧಿ ಒಪ್ಪಂದಕ್ಕೆ ಸಹಿಹಾಕುವ ಜೊತೆಗೆ, ಈ ಪರ್ಶಿಯನ್ ಕೊಲ್ಲಿ ತೀರದ ರಾಷ್ಟ್ರದಿಂದ ತನ್ನ ತೈಲ ಆಮದನ್ನು ಎರಡು ಪಟ್ಟು ಹೆಚ್ಚಿಸಿಕೊಳ್ಳಲೂ ಭಾರತ ಉದ್ದೇಶಿಸಿದೆ. ಚಬ್ಬರ್ ಬಂದರಿನ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿಹಾಕುವ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಶಿಪ್ಪಿಂಗ್ ಸಚಿವ ನಿತಿನ್ ಗಡ್ಕರಿ ಕೂಡಾ ಉಪಸ್ಥಿತರಿರುವರು.
ಮೋದಿಯವರ ಇರಾನ್ ಭೇಟಿಗೆ ಪೂರ್ವಭಾವಿಯಾಗಿ, ಸಾರಿಗೆ ಸಚಿವ ಗಡ್ಕರಿ, ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟೆಹರಾನ್‌ಗೆ ಭೇಟಿ ನೀಡಿದ್ದರು.







