ಭಾರತ ತಂಡಕ್ಕೆ ಕೋಚ್ ನೇಮಕ ವಿಳಂಬ: ಸೌರವ್ ಗಂಗುಲಿ

ಮುಂಬೈ, ಮೇ 22: ‘‘ಭಾರತೀಯ ಕ್ರಿಕೆಟ್ ತಂಡಕ್ಕೆ ಶೀಘ್ರವೇ ಹೊಸ ಕೋಚ್‌ರನ್ನು ನೇಮಕ ಮಾಡುವ ಸಾಧ್ಯತೆಯಿಲ್ಲ. ಈ ಪ್ರತಿಷ್ಠಿತ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇನ್ನು ಕೆಲವು ಸಮಯ ಬೇಕಾಗಬಹುದು’’ ಎಂದು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಸೌರವ್ ಗಂಗುಲಿ ರವಿವಾರ ಹೇಳಿದ್ದಾರೆ.
ಗಂಗುಲಿಯ ಈ ಹೇಳಿಕೆಯನ್ನು ಗಮನಿಸಿದರೆ ಭಾರತ ತಂಡ ಜೂ.11 ರಿಂದ ಆರಂಭವಾಗಲಿರುವ ಝಿಂಬಾಬ್ವೆ ಪ್ರವಾಸಕ್ಕೆ ಪೂರ್ಣಕಾಲಿಕ ಕೋಚ್‌ರಿಲ್ಲದೆ ತೆರಳುವುದು ಖಚಿತವಾಗಿದೆ.
‘‘ನೂತನ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯಲು ಇನ್ನು ಕೆಲವು ತಿಂಗಳು ಬೇಕಾಗಬಹುದು. ಝಿಂಬಾಬ್ವೆ ಪ್ರವಾಸಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ಅದಕ್ಕಿಂತ ಮೊದಲು ಈ ಕಾರ್ಯ ನಡೆಯುವ ಸಾಧ್ಯತೆಯಿಲ್ಲ ಎಂದು ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿಯಲ್ಲಿರುವ ಗಂಗುಲಿ ಹೇಳಿದ್ದಾರೆ.
ಭಾರತ ತಂಡ ಝಿಂಬಾಬ್ವೆ ಪ್ರವಾಸ ಕೊನೆಗೊಂಡ ಬಳಿಕ ಜುಲೈ-ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಕೆರಿಬಿಯನ್ ನಾಡಿಗೆ ತೆರಳಲಿದೆ.
ಡಂಕನ್ ಫ್ಲೆಚರ್ ಕೋಚ್ ಹುದ್ದೆ ತೊರೆದ ಬಳಿಕ ಭಾರತ ತಂಡ ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಎಲ್ಲ ಪ್ರಕಾರದ ಸರಣಿಯಲ್ಲಿ ಆಡಿತ್ತು. ಶಾಸ್ತ್ರಿ ಅವರ ಅಧಿಕಾರದ ಅವಧಿ ಮಾರ್ಚ್-ಎಪ್ರಿಲ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ವೇಳೆಗೆ ಕೊನೆಗೊಂಡಿತ್ತು.





