ಐಎಸ್‌ಎಸ್‌ಎಫ್ ವಿಶ್ವಕಪ್: 50 ಮೀ. ಫೈನಲ್‌ಗೆ ಜಿತು ರಾಯ್ ಅರ್ಹತೆ

ಮ್ಯೂನಿಚ್, ಮೇ 21: ಉತ್ತಮ ಫಾರ್ಮ್‌ನ್ನು ಮುಂದುವರಿಸಿದ ಭಾರತದ ಪಿಸ್ತೂಲ್ ಶೂಟರ್ ಜಿತು ರಾಯ್ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪುರುಷರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಅರ್ಹತಾ ಸುತ್ತಿನ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಜಿತು ಎಲಿಮಿನೇಶನ್ ರೌಂಡ್‌ನಲ್ಲಿ 562 ಅಂಕ ಗಳಿಸಿ ನಾಲ್ಕನೆ ಸ್ಥಾನ ಪಡೆದರು.
ಜಿತು ಅವರ ಸಹ ಆಟಗಾರ ಪ್ರಕಾಶ್ ನಂಜಪ್ಪ 555 ಅಂಕ ಗಳಿಸಿ ಎಲಿನೇಶನ್ ರಿಲೇಯಲ್ಲಿ 13ನೆ ಸ್ಥಾನ ಪಡೆದರು. ಭಾರತದ ಇನ್ನೊರ್ವ ಆಟಗಾರ ಓಂಕಾರ್ ಸಿಂಗ್ 547 ಅಂಕ ಗಳಿಸಿ ಮುಂದಿನ ಸುತ್ತಿಗೇರಿದರು.
ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ 626.2 ಅಂಕವನ್ನು ಗಳಿಸಿರುವ ಒಲಿಂಪಿಕ್ಸ್ ಚಾಂಪಿಯನ್ ಅಭಿನವ್ ಬಿಂದ್ರಾ 15ನೆ ಸ್ಥಾನ ಪಡೆದಿದ್ದಾರೆ. ಕಳೆದ ಕೆಲವು ವಿಶ್ವಕಪ್‌ನಲ್ಲಿ ಬಿಂದ್ರಾ ಸ್ಥಿರವಾಗಿ ಅಂಕವನ್ನು ಗಳಿಸುತ್ತಿದ್ದರೂ ಫೈನಲ್ ಸುತ್ತಿಗೆ ತೇರ್ಗಡೆಯಾಗಲು ವಿಫಲರಾಗಿದ್ದಾರೆ.
ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಅನಿಸಾ ಸೈಯದ್ 291 ಅಂಕ ಗಳಿಸಿ 12ನೆ ಸ್ಥಾನ ಪಡೆದಿದ್ದಾರೆ. 282 ಅಂಕ ಗಳಿಸಿದ ಪುಷ್ಪಾಂಜಲಿ ರಾಣಾ 66ನೆ ಸ್ಥಾನವನ್ನು ಪಡೆದರು.





