ಐಸಿಸಿ ಟೆಸ್ಟ್ ರ್ಯಾಂಕಿಂಗ್: 2ನೆ ಸ್ಥಾನ ಉಳಿಸಿಕೊಂಡ ಅಶ್ವಿನ್
ದುಬೈ, ಮೇ22: ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರವಿವಾರ ಇಲ್ಲಿ ಬಿಡುಗಡೆಯಾದ ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳ ಅಗ್ರ-10ರ ಪಟ್ಟಿಯಲ್ಲಿ ಭಾರತದ ಯಾವೊಬ್ಬ ದಾಂಡಿಗ ಸ್ಥಾನ ಪಡೆದಿಲ್ಲ.
ಅಶ್ವಿನ್(871) ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್(872)ಗಿಂತ ಕೇವಲ ಒಂದು ಅಂಕ ಹಿಂದಿದ್ದಾರೆ. ಶ್ರೀಲಂಕಾ ವಿರುದ್ಧ ಶನಿವಾರ ಕೊನೆಗೊಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗೊಂಚಲು ಕಬಳಿಸಿದ್ದ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಅಗ್ರ-3ರಲ್ಲಿ ಸ್ಥಾನ ಪಡೆದಿದ್ದಾರೆ. 49 ಅಂಕವನ್ನು ಗಳಿಸಿರುವ ಆ್ಯಂಡರ್ಸನ್ ಜೀವನಶ್ರೇಷ್ಠ 854 ಅಂಕ ಸಂಪಾದಿಸಿದ್ದಾರೆ.
ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್(925) ಮೊದಲನೆ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್(876), ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸನ್(868), ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ(860) ಹಾಗೂ ಪಾಕಿಸ್ತಾನದ ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್(826) ಬಳಿಕದ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಟೆಸ್ಟ್ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ 406 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.





