ಅನಂತಮೂರ್ತಿಯನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಕೊಳದ ಮಠದ ಶಾಂತವೀರಸ್ವಾಮಿ

ಬೆಂಗಳೂರು, ಮೇ 22: ‘ಡಾ.ಯು.ಆರ್.ಅನಂತಮೂರ್ತಿ ರಾಜಕೀಯ ನಾಯಕರ ಬೆಂಬಲದಿಂದ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ’ ಎಂದು ಗಂಭೀರ ಆರೋಪ ಮಾಡಿರುವ ಕೊಳದ ಮಠದ ಶ್ರೀ ಶಾಂತವೀರಸ್ವಾಮಿ, ‘ದೇವರ ಮೂರ್ತಿಯ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆಂದಿದ್ದ ಅನಂತಮೂರ್ತಿ ದೇಶದ್ರೋಹಿ, ಅವರನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು’ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ರವಿವಾರ ನಗರದ ಎನ್‌ಜಿಒ ಸಭಾಂಗಣದಲ್ಲಿ ರಾಜ್ ಮೀಡಿಯಾ ಸಾಂಸ್ಕೃತಿಕ ಅಕಾಡಮಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ವಿಧಿ-ವಿಧಾನಗಳನ್ನು ವಿರೋಧಿಸಿದ ಅನಂತಮೂರ್ತಿ ತಾನು ಸತ್ತಾಗ ಯಾವ ರೀತಿ ತನ್ನ ಮೃತದೇಹವನ್ನು ಮಣ್ಣು ಮಾಡಬೇಕೆಂದು ಬರೆದಿಟ್ಟಿದ್ದ ದ್ವಂದ್ವ ವ್ಯಕ್ತಿ’ ಎಂದು ಹೀಯಾಳಿಸಿದರು.
‘ಯು.ಆರ್. ಅನಂತಮೂರ್ತಿ ಬದುಕಿದ್ದಾಗ ದೇವರ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆಂಬ ಹೇಳಿಕೆ ನೀಡಿದ್ದರು. ಅದಕ್ಕೆ ತಾನು ‘ನಿಮಗೆ ತಾಕತ್ತಿದ್ದರೆ ನಿಮ್ಮ ತಂದೆ-ತಾಯಿಯ ಫೋಟೊ ಮೇಲೆ ಮೂತ್ರ ಮಾಡಿ ಎಂದು ಸವಾಲು ಹಾಕಿದ್ದೆ. ಆದರೆ, ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ’ ಎಂದು ಶಾಂತವೀರಸ್ವಾಮಿ ಉಲ್ಲೇಖಿಸಿದರು.
‘ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಯನ್ನು ಗೌರವಿಸುವ ಸಂಪ್ರದಾಯ ಮರೆಯಾಗುತ್ತಿದೆ. ಎಲ್ಲರೂ ಪಾಶ್ಚಿಮಾತ್ಯ ಪದ್ಧತಿಯನ್ನು ಅನುಸರಿಸುತ್ತಿದ್ದು, ಇದರಿಂದ ನಮ್ಮ ದೇಶದ ಸಂಸ್ಕೃತಿ ನಾಶವಾಗುತ್ತಿದೆ. ಮಠ-ಮಂದಿರಗಳು ಹಾಗೂ ಜನಪ್ರತಿನಿಧಿಗಳು ಹಣ ಮಾಡುವ ಅಡ್ಡೆಗಳಾಗಿ ಪರಿವರ್ತನೆಯಾಗುತ್ತಿವೆ’ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲೆ್ಗೂಂಡಿದ್ದ ಮಾಜಿ ಕೇಂದ್ರ ಸಚಿವ ಡಾ.ಎಂ.ವಿ. ರಾಜಶೇಖರನ್ ಮಾತನಾಡಿ, ನಮ್ಮ ದೇಶದಲ್ಲಿನ ರಾಜಕೀಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಸಂಸದೀಯ ವ್ಯವಸ್ಥೆ ನಾಶವಾಗುತ್ತಿದ್ದು, ಇದು ಬದಲಾಗದಿದ್ದರೆ, ಮುಂದಿನ ದಿನಗಳಲ್ಲಿ ದೇಶ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ದೇಶದ ಜನಸಂಖ್ಯೆಯ ಅರ್ಧದಷ್ಟು ಯುವ ಜನಾಂಗವಿದ್ದು, ಅವರೆಲ್ಲರೂ ದೇಶ ಕಟ್ಟಲು ಮುಂದೆ ಬರಬೇಕು. ಅದಕ್ಕಾಗಿ ಯುವಜನರಿಗೆ ನೈತಿಕ ವೌಲ್ಯ, ಮಾನವೀಯ ಮತ್ತು ಕೌಟುಂಬಿಕ ವೌಲ್ಯಗಳ ಬಗ್ಗೆ ಅರ್ಥ ಮಾಡಿಸಬೇಕು. ಇಲ್ಲವಾದರೆ ಯುವ ಜನರು ಹಾದಿ ತಪ್ಪುತ್ತಾರೆ ಎಂದು ಹೇಳಿದರು.
ಕುಟುಂಬ ವ್ಯವಸ್ಥೆ ನಮ್ಮ ಸಮಾಜದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂದು ಜಗತ್ತು ಉಳಿದಿರುವುದೇ ಕುಟುಂಬದ ಆಧಾರದ ಮೇಲೆ. ಆದರೆ, ಇಂದು ಕುಟುಂಬದ ಪರಿಕಲ್ಪನೆ ಪಾಶ್ಚಿಮಾತ್ಯ ಪದ್ಧತಿಯನ್ನು ಅನುಕರಣೆ ಮಾಡಲಾಗುತ್ತಿದೆ. ಈ ವ್ಯವಸ್ಥೆಗೆ ಬಲಿಯಾಗಬಾರದು. ಇದರಿಂದ ಅದಷ್ಟು ದೂರವಿರಬೇಕು ಎಂದರು. ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಆಶಾ ಎಸ್.ಬಿಳಗಿ ಮತ್ತು ಬಸವಣ್ಣ ಕಾರಿ, ಶಿವಪ್ಪ ಕೌಜಲಗಿ, ನೇಮಣ್ಣ ತೇರದಾಲ ಹಾಗೂ ಪರಮಾನಂದಮಾಡಿ ಇವರಿಗೆ ‘ಸಹಕಾರ ರತ್ನ ಪ್ರಶಸ್ತಿ’, ಈರಪ್ಪ ಕಂಕೊಳ್ಳಿ, ಎಸ್.ಎಮ್.ಮುಲ್ಲಾ, ಸಾದಾಶಿವ ದೇವರ, ಮಹಾದೇವಿ, ಶಂಕರ ಎಸ್.ದಾಸಣ್ಣ ಇವರಿಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.







