ರಸ್ತೆ ಜಗಳದಲ್ಲಿ ಬಲಿಯಾಗಿದ್ದ ವಿದ್ಯಾರ್ಥಿಗೆ ಶೇ. 70 ಅಂಕ!
ಪಾಟ್ನಾ, ಮೇ 22: ಗಯಾದಲ್ಲಿ ಬಿಹಾರದ ಅಮಾನತಾಗಿರುವ ಶಾಸಕಿಯ ಪುತ್ರನ ಗುಂಡು ದಾಳಿಗೆ ಬಲಿಯಾಗಿರುವ 19ರ ಹರೆಯದ ಆದಿತ್ಯ ಸಚ್‌ದೇವ್, 12ನೆ ತರಗತಿಯ ಮಂಡಳಿ ಪರೀಕ್ಷೆಯಲ್ಲಿ ಶೇ.70 ಅಂಕ ಗಳಿಸಿದ್ದಾನೆ.
ತನ್ನ ರೇಂಜರ್ ರೋವರ್ ಕಾರನ್ನು ಹಿಂದೆ ಹಾಕಿದನೆಂಬ ಸಿಟ್ಟಿನಲ್ಲಿ ಅಮಾನತಾಗಿರುವ ಜೆಡಿಯು ಶಾಸಕಿ ಮನೋರಮಾ ದೇವಿಯ ಪುತ್ರ ರಾಕಿ ಯಾದವ್ ಮೇ 7ರಂದು ರಾತ್ರಿ ಗಯಾದಲ್ಲಿ ಗುಂಡಿಕ್ಕಿ ಕೊಂದಿದ್ದನು.
ಮಗನ ಪರೀಕ್ಷಾ ಫಲಿತಾಂಶ ತಮ್ಮ ನೋವನ್ನು ಇನ್ನಷ್ಟು ಹೆಚ್ಚಿಸಿದೆಯೆಂದು ಆದಿತ್ಯನ ತಂದೆ ಶ್ಯಾಮ್‌ಸುಂದರ್ ಸಚ್‌ದೇವ್ ಹಾಗೂ ತಾಯಿ ಚಂದಾ ಸಚ್‌ದೇವ್ ಹೇಳಿದ್ದಾರೆ.
ತನ್ನ ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಆದರೆ, ಜೀವನದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ. ಅವನು ಜೀವಂತವಿರುತ್ತಿದ್ದರೆ ತಾವು ಸಂತೋಷ ಅನುಭವಿಸುತ್ತಿದ್ದೆವು. ಆದರೆ, ತಾವು ಈಗೇನು ಹೇಳಲಿ ಎಂದು ಸಚ್‌ದೇವ್ ಶೋಕಿಸಿದ್ದಾರೆ. ತಾವು ಅನೇಕ ಆಸೆಗಳನ್ನು ಇರಿಸಿಕೊಂಡಿದ್ದೆವು. ತಾವು ಪರಿಶೀಲಿಸಿಲ್ಲವಾದರೂ ಆದಿತ್ಯನ ಸ್ನೇಹಿತರು ಆತ ಶೇ.70 ಅಂಕ ಗಳಿಸಿದ್ದಾನೆಂದು ತಿಳಿಸಿದ್ದಾರೆಂದು ಚಂದಾ ಸಚ್‌ದೇವ್ ಹೇಳಿದ್ದಾರೆ. ವಾಣಿಜ್ಯ ವಿದ್ಯಾರ್ಥಿಯಾಗಿದ್ದ ಆದಿತ್ಯ ದಿಲ್ಲಿ ಅಥವಾ ಮುಂಬೈಯಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಬಯಸಿದ್ದನೆಂದು ಆತನ ಕುಟುಂಬಿಕರು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಆದಿತ್ಯ ಸಾಧಾರಣ ವಿದ್ಯಾರ್ಥಿಯಾಗಿದ್ದ. ಶೇ.70ರ ಮೇಲೆ ಫಲಿತಾಂಶ ಆತನಿಗೆ ಸಂತೋಷ ಉಂಟುಮಾಡುತ್ತಿತ್ತು. ಅವನು ಸದಾ ದೊಡ್ಡ ನಗರದಲ್ಲಿ ವಾಸಿಸ ಬಯಸಿದ್ದನೆಂದು ಆದಿತ್ಯನ ನಿಕಟ ಸ್ನೇಹಿತ. ಅಭಿಶರ್ಮ ಎಂಬಾತ ಹೇಳಿದ್ದಾನೆ.







