ಮುಸ್ಲಿಂ ಸೇನಾಧಿಕಾರಿ ಪತ್ನಿಗೂ ದಿಲ್ಲಿಯಲ್ಲಿ ಬಾಡಿಗೆ ಮನೆ ಸಿಗುವುದಿಲ್ಲ!
ಹೊಸದಿಲ್ಲಿ, ಮೇ 22: ಮುಸ್ಲಿಮ್ ಸೇನಾಧಿಕಾರಿಯವರ ಪತ್ನಿ ಅಂಬ್ರೀನ್ ಝೈದಿ ಅವರ ದಿಲ್ಲಿ ಮನೆಬೇಟೆ ಪ್ರಯತ್ನ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಮನೆ ಸಿಗುತ್ತಿಲ್ಲ ಎನ್ನುವ ಅಂಶ ಇದೀಗ ಚರ್ಚೆಯ ವಸ್ತುವಾಗಿದೆ.
ಆದರೆ ರಾಷ್ಟ್ರರಾಜಧಾನಿಯಲ್ಲಿ ಈ ಚಿತ್ರಣ ಅಪರೂಪವೇನಲ್ಲ. ಹಲವು ಮುಸ್ಲಿಂ ಕುಟುಂಬಗಳು ಈ ಸಮಸ್ಯೆ ಎದುರಿಸುತ್ತಿದ್ದು, ಈ ಪರಿಣಾಮವಾಗಿ ಸುಶಿಕ್ಷಿತ ಮಂದಿ ಕೂಡಾ ವಲ್ಲೇದ್ ಸಿಟಿ ಹಾಗೂ ಜಾಮಿಯಾ ನಗರದಂಥ ಘೆಟ್ಟೊಗಳಲ್ಲಿ ವಾಸಿಸುತ್ತಿದ್ದಾರೆ. ಸೇನಾಧಿಕಾರಿ ಪತ್ನಿಯ ಮನೆಬೇಟೆ ಇದೀಗ ಟ್ವಿಟರ್‌ನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಜೈದಿ ಮೇ 19ರಂದು ಮೊಟ್ಟಮೊದಲ ಬಾರಿಗೆ ಈ ವಿಷಯವನ್ನು ಬಹಿರಂಗಪಡಿಸಿದ್ದರು. ನಾವು ದಿಲ್ಲಿಯಲ್ಲಿ ಮನೆ ಹುಡುಕುತ್ತಿದ್ದು, ಮಾಲಕರು ನಮ್ಮ ಧರ್ಮವನ್ನು ತಿಳಿದುಕೊಂಡ ಬಳಿಕ ಮನೆ ನೀಡಲು ನಿರಾಕರಿಸುತ್ತಿದ್ದಾರೆ. ನನ್ನ ಪತಿ ಸೇನಾ ಅಧಿಕಾರಿಯಾಗಿದ್ದರೂ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದು ಹೇಳಿದ್ದರು.
ಅಲ್ಪಸಂಖ್ಯಾತ ವಲಸೆ ಕುಟುಂಬಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆಯಾಗಿ ಈ ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವಿಸ್ತೃತ ಚರ್ಚೆಗೆ ಕಾರಣವಾಯಿತು.





