ಇನ್ನು ಬಿಸ್ಮಿಲ್ಲಾ, ಬಿಜು ಮಂತ್ರ ಪಠಿಸಲಿರುವ ಕೇಂದ್ರ ಸರಕಾರ
ಹೊಸದಿಲ್ಲಿ, ಮೇ 22: ಕೇಂದ್ರ ಸರಕಾರದ ಯೋಜನೆಗಳಿಗೆ ನೆಹರೂ- ಗಾಂಧಿ ಹೆಸರುಗಳನ್ನು ಬಿಟ್ಟು, ಬೇರೆ ಹೆಸರುಗಳನ್ನು ಇಡಲು ಮುಂದಾಗಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದ ರಾಷ್ಟ್ರೀಯ ಅನುಷ್ಠಾನ ಸಮಿತಿ, ಇದೀಗ ಬಿಜೆಡಿ ಸಂಸ್ಥಾಪಕ ಹಾಗೂ ಒಡಿಶಾದ ಎರಡು ಬಾರಿಯ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಹಾಗೂ ಶಹನಾಯ್ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಹೆಸರಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ.
ಹಲವು ರಾಷ್ಟ್ರೀಯ ಆಸ್ತಿಗಳಲ್ಲಿ ಗಾಂಧಿ ಕುಟುಂಬದ ಹೆಸರುಗಳು ರಾರಾಜಿಸುತ್ತಿವೆ ಎಂದು ನಟ ರಿಶಿ ಕಪೂರ್ ಟ್ವೀಟ್ ಮಾಡಿರುವುದರಿಂದ ಕೇಂದ್ರದ ಈ ನಿರ್ಧಾರ ಬಹಿರಂಗವಾಗಿದೆ. ಮೊಟ್ಟಮೊದಲ ಪ್ರಧಾನಿಯ ಹೆಸರನ್ನು ಸಂಸ್ಕೃತಿ, ರಾಜಕೀಯ ಹಾಗೂ ಇತಿಹಾಸದಲ್ಲಿ ಪ್ರಾಬಲ್ಯ ಸ್ಥಾಪಿಸುವ ಪ್ರಯತ್ನಕ್ಕೆ ಇದರಿಂದ ತಡೆ ಬೀಳಲಿದೆ.
ಈ ಹೆಸರುಗಳ ಬದಲಾಗಿ ರಾಷ್ಟ್ರೀಯವಾದಿ ಹೆಸರುಗಳನ್ನು ಸೇರಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದರಲ್ಲಿ ಅಲ್ಪಸಂಖ್ಯಾತ ಮುಖಂಡರ ಹೆಸರುಗಳನ್ನೂ ಸೇರಿಸಲು ಮುಂದಾಗಿದೆ. ಕಳೆದ ವರ್ಷ ತಾತ್ಯಾಟೋಪಿಯವರ ಹೆಸರು, ರಾಜಪೂತ ಅರಸ ಮಹಾರಾಣಾ ಪ್ರತಾಪ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದವು.
ಈ ವರ್ಷ ಬಿಜು ಪಟ್ನಾಯಕ್ ಅವರ ಜನ್ಮಶತಮಾನೋತ್ಸವ ವಾಗಿದ್ದು, ಮೋದಿಯವರ ಕ್ಷೇತ್ರವಾದ ವಾರಾಣಾಸಿಯ ಬಿಸ್ಮಿಲ್ಲಾ ಖಾನ್, ಹಿಂದಿ ಕಾದಂಬರಿಕಾರ ಅಮೃತಲಾಲ್ ನಾಗರ್, ಖ್ಯಾತ ಕರ್ನಾಟಕ ಸಂಗೀತಗಾರ್ತಿ ಎಂ.ಎಸ್.ಸುಬ್ಬುಲಕ್ಷ್ಮೀ ಅವರ ಹೆಸರನ್ನು ಸೇರಿಸಲು ನಿರ್ಧರಿಸಲಾಗಿದೆ. ರಾಮಕೃಷ್ಣ ವೇದಾಂತ ಮಠದ ಸಂಸ್ಥಾಪಕ ಸ್ವಾಮಿ ಅಭೇದಾನಂದ ಅವರ 150ನೆ ಜಯಂತಿಯಾಗಿದ್ದು, ಈ ಹೆಸರು ಕೂಡಾ ಸೇರ್ಪಡೆಯಾಗಲಿದೆ. ಈ ಸಮಿತಿಯಲ್ಲಿ ಸಚಿವ ಅರುಣ್ ಜೇಟ್ಲ್ಲಿ, ಮಹೇಶ್ ಶರ್ಮಾ ಮತ್ತು ಅಧಿಕಾರಿಗಳು ಇದ್ದಾರೆ.







