ಕಾಂಗ್ರೆಸ್ ಮುಕ್ತ ಭಾರತ ಹೇಳಿಕೆ ದುರಹಂಕಾರದ ಪರಮಾವಧಿ: ಎಸ್.ಎಂ.ಕೃಷ್ಣ

ಬೆಂಗಳೂರು, ಮೇ 22: ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುವುದು ದುರಹಂಕಾರದ ಪರಮಾವಧಿ. ಯಾವುದೆ ಒಂದು ರಾಜಕೀಯ ಪಕ್ಷದ ಸೋಲು ಗೆಲುವು ಇನ್ನೊಂದು ರಾಜಕೀಯ ಪಕ್ಷದ ಕೈಯಲ್ಲಿ ಇಲ್ಲ ಎಂದು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿರುಗೇಟು ನೀಡಿದ್ದಾರೆ.
ಚುನಾವಣೆಗಳಲ್ಲಿ ಏಳುಬೀಳುಗಳು ಸಹಜ ಪ್ರಕ್ರಿಯೆ ಎನ್ನುವುದನ್ನು ಬಿಜೆಪಿ ಮುಖಂಡರು ಮನಗಾಣಬೇಕು. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 137 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ ಪಕ್ಷವು ಸ್ವಂತ ಬಲದ ಮೇಲೆ ಕೇವಲ 67 ಸ್ಥಾನಗಳನ್ನು ಪಡೆದಿದೆ. ಆದರೆ, ಮಂತ್ರಕ್ಕಿಂತ ಉಗುಳೆ ಜಾಸ್ತಿ ಎನ್ನುವ ಹಾಗೆ ಅಬ್ಬರದ ಪ್ರಚಾರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಹಸಿಮುಕ್ತ, ನಿರುದ್ಯೋಗ ಸಮಸ್ಯೆ ನಿವಾರಣೆ, ಪಂಚವಾರ್ಷಿಕ ಯೋಜನೆಗಳು, ವಿದೇಶಾಂಗ ನೀತಿಗಳು, ನೀರಾವರಿ, ಕೃಷಿ, ಶಿಕ್ಷಣ, ಬಡತನ ನಿರ್ಮೂಲನೆ, ಯುವಶಕ್ತಿ ಮತ್ತು ಮಹಿಳಾ ಸಬಲೀಕರಣ ಕಾಂಗ್ರೆಸ್ ಪಕ್ಷದ ಆದ್ಯತೆ. ಆದರೆ, ಇಂದು ಬಿಜೆಪಿಯವರು ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇವೆ ಎಂದು ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಭಾಷಣಗಳ ಮುಖಾಂತರ ಕೇಸರೀಕರಣ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ನೆಹರು ಮನೆತನದ ವಿರುದ್ಧ ನರೇಂದ್ರಮೋದಿ ದ್ವೇಷದ ರಾಜಕೀಯ ಮಾಡುವುದನ್ನೇ ಗುರಿಯನ್ನಾಗಿ ಇಟ್ಟು ಕೊಂಡಿರುವುದು ಬಹಳ ಕಾಲ ನಡೆಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲುಗೆಲುವುಗಳನ್ನು ಸ್ವೀಕರಿಸಬೇಕು ಎಂದು ಎಸ್.ಎಂ.ಕೃಷ್ಣ ಸಲಹೆ ನೀಡಿದ್ದಾರೆ.







